ಅತ್ಯಾಚಾರ ಸಂತ್ರಸ್ತೆ ಜತೆ ಸೆಲ್ಫಿ: ರಾಜೀನಾಮೆ ನೀಡಿದ ಸೌಮ್ಯ ಗುರ್ಜರ್

ಶುಕ್ರವಾರ, 1 ಜುಲೈ 2016 (11:16 IST)
ಅತ್ಯಾಚಾರ ಸಂತ್ರಸ್ತೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ದೇಶಾದ್ಯಂತ ಖಂಡನೆಗೆ ಒಳಗಾಗಿದ್ದ ರಾಜಸ್ತಾನದ ಮಹಿಳಾ ಆಯೋಗದ ಸದಸ್ಯೆ ಸೌಮ್ಯಾ ಗುರ್ಜರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ ಅವರಿಗೆ ಸೌಮ್ಯಾ ತಮ್ಮ ರಾಜೀನಾಮೆಯನ್ನು ಹಸ್ತಾಂತರಿಸಿದ್ದಾರೆ.
 
ಸೌಮ್ಯ ಅವರ ವರ್ತನೆ ಅಸಂವೇದನೀಯ ಎಂದಿರುವ ಆಯೋಗದ ಅಧ್ಯಕ್ಷೆ ಅವರಿಗೆ ಸಮನ್ಸ್ ಕೂಡ ಜಾರಿ ಮಾಡಿದೆ. 
 
ಅತ್ಯಾಚಾರ ಪೀಡಿತೆ ಉತ್ತರ ಜೈಪುರದ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದಾಗ ಆಯೋಗದ ಸದಸ್ಯೆ ಸೌಮ್ಯ ಗುರ್ಜರ್ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡಿದ್ದರು. 
 
ಗುರ್ಜರ್ ಸೆಲ್ಫಿ ಕ್ಲಿಕ್ಕಿಸುತ್ತಿರುವ ಎರಡು ಚಿತ್ರಗಳು ವಾಟ್ಸ್‌ಅಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡಿದ್ದು
ಅದರಲ್ಲೂ ಆಯೋಗದ ಮುಖ್ಯಸ್ಥೆ ಸುಮನ್ ಶರ್ಮಾರವರು ಸಹ ಈ ಸೆಲ್ಫಿಯಲ್ಲಿರುವುದು ಕಂಡು ಬಂದಿತ್ತು. ನಾನು ಪೀಡಿತೆಯ ಜತೆ ಸೆಲ್ಫಿಯನ್ನು ಕ್ಲಿಕ್ಕಿಸುತ್ತಿದ್ದಾಗ ಸದಸ್ಯೆ ಸೆಲ್ಫಿ ಕ್ಲಿಕ್ಕಿಸಿದರು. ಅವರು ಯಾವಾಗ ಸೆಲ್ಫಿ ತೆಗೆದರೆಂದು ನನಗೆ ಗೊತ್ತಾಗಲಿಲ್ಲ. ನಾನು ಈ ಕೃತ್ಯವನ್ನು ಖಂಡಿಸುತ್ತೇನೆ ಜತೆಗೆ ಅವರಿಂದ ನಾಳೆಯ ಒಳಗೆ ಸ್ಪಷ್ಟನೆಯನ್ನು ನೀಡುವಂತೆ ಕೇಳಿದ್ದೇನೆ ಎಂದು ಶರ್ಮಾ ಹೇಳಿದ್ದರು. ಬಳಿಕ ಗುರ್ಜರ್ ಅವರಿಗೆ ಸಮನ್ಸ್ ನೀಡಲಾಗಿತ್ತು. 
 
ನಾನು ದಾಖಲೆಗಳಿಗಾಗಿ ಆಕೆಯ ಫೋಟೋಗಳನ್ನು ಕ್ಲಿಕ್ಕಿಸುತ್ತಿದೆ. ಆಗ ಆಕೆ ಕ್ಯಾಮರಾ ಬಗ್ಗೆ ಆಸಕ್ತಿ ತೋರಿದಳು. ಅದೇನು ಎಂದು ಆಕೆ ಕೇಳಿದಾಗ ಇದು ಕ್ಯಾಮರಾ ಎಂದೆ. ಅದಕ್ಕವಳು ನನ್ನ ಪೋಟೋವನ್ನು ಸಹ ಕ್ಲಿಕ್ಕಿಸಿ ಎಂದಳು. ಆಕೆ ಕೇಳಿದಳೆಂದು, ಆಕೆಯ ಜತೆ ಸೆಲ್ಫಿ ತೆಗೆದುಕೊಂಡೆ, ಅವಳ ಜತೆ ಸಹಜವಾಗಿ ಬೆರೆತು ಹೀಗೆ ಮಾಡಿದೆ ಎಂದು ಗುರ್ಜರ್ ತಮ್ಮ ಕೃತ್ಯಕ್ಕೆ ಸಮರ್ಥನೆಯನ್ನು ನೀಡಿದ್ದಾರೆ. 


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ