ಸೆಲ್ಫಿ ವಿತ್ ಡಾಟರ್ : ದಿಗ್ವಿಜಯ್ ಸಿಂಗ್ ಪ್ರೇಯಸಿ ಜತೆಗಿದ್ದ ಫೋಟೋ ಹಾಕಿದ ನ್ಯೂಯಾರ್ಕ್ ಟೈಮ್ಸ್

ಗುರುವಾರ, 2 ಜುಲೈ 2015 (12:38 IST)
ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿರುವ ಸೆಲ್ಫಿ ವಿತ್ ಡಾಟರ್ ಅಭಿಯಾನಕ್ಕೆ ಜಗತ್ತಿನಾದ್ಯಂತ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ಈ ಕುರಿತು ಸುದ್ದಿ ಹರಿದಾಡುತ್ತಿದೆ. ಈ ಕುರಿತು ವರದಿ ಮಾಡಲು ಹೋದ ಪ್ರಖ್ಯಾತ ಪತ್ರಿಕೆ ನ್ಯೂಯಾರ್ಕ್‌ ಟೈಮ್ಸ್‌ ಫೋಟೊ ಪ್ರಕಟಿಸುವಲ್ಲಿ ಬಹುದೊಡ್ಡ ಎಡವಟ್ಟು ಮಾಡಿ ಮುಜುಗರಕ್ಕೆ ಒಳಗಾಗಿದೆ. ಜತೆಗೆ ಭಾರತದ ಪ್ರಮುಖ ರಾಜಕೀಯ ಪಕ್ಷದ ನಾಯಕರೊಬ್ಬರಿಗೂ ಮುಜುಗರವನ್ನುಂಟು ಮಾಡಿದೆ. 

ಸುದ್ದಿ ಪ್ರಕಟಿಸುವ ಆತುರದಲ್ಲಿ ನ್ಯೂಯಾರ್ಕ್‌ ಟೈಮ್ಸ್‌ ಬಹುದೊಡ್ಡ ಪ್ರಮಾದ ಎಸಗಿದ್ದು, ಸೆಲ್ಫಿ ವಿತ್ ಡಾಟರ್ ಶೀರ್ಷಿಕೆಯಡಿ  ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮತ್ತು ಅವರ ಪ್ರಿಯತಮೆ ಪತ್ರಕರ್ತೆ ಅಮೃತಾ ರೈ ಫೋಟೋವನ್ನು ಪ್ರಕಟಿಸಿ ಯಡವಟ್ಟು ಮಾಡಿದೆ.
 
ದಿಗ್ವಿಜಯ್ ಸಿಂಗ್ ತಮ್ಮ ಮಗಳ ವಯಸ್ಸಿನ ಅಮೃತಾ ರೈ ಅವರ ಜತೆಗಿದ್ದ ಖಾಸಗಿ ಫೋಟೋಗಳು ಕಳೆದ ವರ್ಷ ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ವೈರಲ್ ಆಗಿ ಹರಿದಾಡಿತ್ತು. ಇದರಿಂದ ಮುಜುಗರಕ್ಕೊಳಗಾದ ಕಾಂಗ್ರೆಸ್‌ನ ಹಿರಿಯ ನಾಯಕ ತಾವು ಪತ್ರಕರ್ತೆ ರೈ ಜತೆ ಸದ್ಯದಲ್ಲಿಯೇ ವಿವಾಹವಾಗುವುದಾಗಿ ಹೇಳಿಕೆ ನೀಡಿದ್ದರು. ಆದರೆ ವಿವಾಹವಾಗಬೇಕಿದ್ದ ಜೋಡಿಯನ್ನು ತಂದೆ ಮಗಳೆಂದು ಭಾವಿಸಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಸೆಲ್ಫಿ ವಿತ್ ಡಾಟರ್ ಶೀರ್ಷಿಕೆಯಡಿ ಅವರಿಬ್ಬರ ಫೋಟೋ ಪ್ರಕಟಿಸಿದೆ.
 
ಪತ್ರಿಕೆಯ ಈ ತಪ್ಪಿಗೆ ದಿಗ್ವಿಜಯ್ ಸಿಂಗ್ ಬೆಲೆ ತೆರಬೇಕಾಗಿದೆ. ಅವರನ್ನು ವ್ಯಂಗ್ಯ ಮಾಡಿ ಕಾಮೆಂಟ್‌ಗಳು ಬರಲು ಪ್ರಾರಂಭವಾಗಿದ್ದು, 'ಇದು ಸೆಲ್ಫಿ ವಿತ್ ಡಾಟರ್ಗಾಗಿ ಸೆಲ್ಫಿ ವಿಥ್ ಡಾಟರ್ ಏಜ್ಡ್  ಗರ್ಲ್ ಫ್ರೆಂಡ್', ಎಂದು ಟ್ವಿಟರ್ ಖಾತೆದಾರರೊಬ್ಬರು ಲೇವಡಿ ಮಾಡಿದ್ದಾರೆ. 
 
ಈ ಕುರಿತು ದಿಗ್ವಿಜಯ್‌ ಸಿಂಗ್‌ ಆಗಲಿ ಅಥವಾ ಅಮೃತಾ ರೈ ಆಗಲಿ ಇದುವರೆಗೂ ಪ್ರತಿಕ್ರಿಯಿಸಿಲ್ಲ. 

ವೆಬ್ದುನಿಯಾವನ್ನು ಓದಿ