ರೋಹಿತ್ ವೆಮುಲಾ ಆತ್ಮಹತ್ಯೆ: ಬಜೆಟ್ ಅಧಿವೇಶನ ಅಸ್ಥವ್ಯಸ್ಥವಾಗುವ ಸಾಧ್ಯತೆಗಳಿವೆ ಎಂದ ಶಿವಸೇನೆ

ಮಂಗಳವಾರ, 2 ಫೆಬ್ರವರಿ 2016 (15:54 IST)
ಹೈದ್ರಾಬಾದ್ ಸಂಶೋಧನಾ ವಿದ್ಯಾರ್ಥಿಯಾದ ರೋಹಿತ್ ವೆಮುಲಾ ಆತ್ಮಹತ್ಯೆ ವಿಷಯ ಮತ್ತಷ್ಟು ರಾಜಕೀಯ ಬಣ್ಣ ಪಡೆಯುತ್ತಿರುವುದರಿಂದ ಮುಂಬರುವ ಬಜೆಟ್ ಅಧಿವೇಶನದ ಕಲಾಪಗಳು ಅಸ್ತವ್ಯಸ್ಥವಾಗುವ ಆತಂಕವಿದೆ ಎಂದು ಶಿವಸೇನೆ ಹೇಳಿದೆ.
 
ಬಜೆಟ್ ಅಧಿವೇಶನ ಆರಂಭಕ್ಕೆ ಕೇವಲ 15 ದಿನಗಳು ಬಾಕಿ ಉಳಿದಿದ್ದು, ರೋಹಿತ್ ವಿಷಯವಾಗಿ ಅಧಿವೇಶನ ಕೋಲಾಹಲ , ಗಲಾಟೆಗಳ ಮಧ್ಯೆಯೇ ಮುಕ್ತಾಯವಾಗುವ ಸಾಧ್ಯತೆಗಳಿವೆ. ಶೀಘ್ರದಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವುದರಿಂದ ರೋಹಿತ್ ಆತ್ಮಹತ್ಯೆ ವಿಷಯ ಮತ್ತಷ್ಟು ಕಾವು ಪಡೆಯತೊಡಗಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಕಟಿಸಿದೆ.  
 
ಪ್ರಧಾನಮಂತ್ರಿ ನರೇಂದ್ರ ಮೋದಿ, ದೇಶ ಒಬ್ಬ ಪುತ್ರನನ್ನು ಕಳೆದುಕೊಂಡಿದೆ ಎಂದು ಹೇಳಿಕೆ ನೀಡಿದ್ದರೆ ಮತ್ತೊಬ್ಬ ಬಿಜೆಪಿ ನಾಯಕ ರೋಹಿತ್ ದೇಶದ ಪುತ್ರನೋ ಅಥವಾ ಭಯೋತ್ಪಾಕರ ಬೆಂಬಲಿಗನೋ ಎನ್ನುವುದು ಶೀಘ್ರದಲ್ಲಿ ಗೊತ್ತಾಗಲಿದೆ ಎಂದು ಹೇಳಿಕೆ ನೀಡಿ ಹೈಕಮಾಂಡ್ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
 
ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಮತ್ತು ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿಯವರ ಮಧ್ಯಪ್ರವೇಶ ರೋಹಿತ್ ಆತ್ಮಹತ್ಯೆಗೆ ಕಾರಣವಾಯಿತು, ರೋಹಿತ್ ತನ್ನ ಅಭಿಪ್ರಾಯಗಳನ್ನು ಮಂಡಿಸಲು ಹೈದ್ರಾಬಾದ್ ವಿಶ್ವವಿದ್ಯಾಲಯ ಯಾಕೆ ಅನುಮತಿ ನೀಡಲಿಲ್ಲ ಎಂದು ಶಿವಸೇನೆ ಪ್ರಶ್ನಿಸಿದೆ.  
 
ರೋಹಿತ್ ಆತ್ಮಹತ್ಯೆಗೆ ಕಾರಣರಾದ ಹೈದ್ರಾಬಾದ್ ವಿಶ್ವವಿದ್ಯಾಲಯದ ಕುಲಪತಿ ಮತ್ತು ಬಂಡಾರು ದತ್ತಾತ್ರೇಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ