ಸೆನ್ಸೆಕ್ಸ್: ಸತತ ಮೂರನೇ ದಿನವೂ ಕುಸಿತ ಕಂಡ ಶೇರುಸೂಚ್ಯಂಕ

ಬುಧವಾರ, 3 ಫೆಬ್ರವರಿ 2016 (19:35 IST)
ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 316 ಪಾಯಿಂಟ್‌ಗಳ ಕುಸಿತ ಕಂಡಿದೆ.
 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಭಾರಿ ಕುಸಿತದಿಂದಾಗಿ ಕಂಗಾಲಾದ ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ಪ್ರಭಾವ ದೇಶಿಯ ಶೇರುಪೇಟೆಯ ಮೇಲೆ ಬೀರಿದೆ ಎಂದು ಮೂಲಗಳು ತಿಳಿಸಿವೆ. 
 
ಕಳೆದ ಮೂರು ದಿನಗಳ ವಹಿವಾಟಿನ ಮುಕ್ತಾಯಕ್ಕೆ 647 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ವಹಿವಾಟಿನ ಅಂತ್ಯಕ್ಕೆ ಮತ್ತೆ 315.68 ಪಾಯಿಂಟ್‌ಗಳ ಕುಸಿತ ಕಂಡು 24,223.32 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 93.75 ಪಾಯಿಂಟ್‌ಗಳ ಕುಸಿತ ಕಂಡು 7,361.80 ಅಂಕಗಳಿಗೆ ತಲುಪಿದೆ. 
 
ಬಿಎಚ್‌ಇಎಲ್, ಎನ್‌ಟಿಪಿಸಿ, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್, ಎಕ್ಸಿಸ್ ಬ್ಯಾಂಕ್, ಸಿಪ್ಲಾ, ಎಸ್‌ಬಿಐ, ಏಷ್ಯನ್ ಪೇಂಟ್ಸ್, ವಿಪ್ರೋ, ಒಎನ್‌ಜಿಸಿ ಮತ್ತು ಆದಾನಿ ಪೋರ್ಟ್ಸ್ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.
 
ಆದರೆ, ಟಿಸಿಎಸ್, ಸನ್‌ಫಾರ್ಮಾ ಮತ್ತು ಬಜಾಜ್ ಅಟೋ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ