ಪಿಡಿಪಿ-ಬಿಜೆಪಿ ಸರಕಾರ ರಚಿಸಲಿ, ನಾವು ಪ್ರತಿಭಟನೆ ಮಾಡ್ಬೇಕು ಎಂದ ಪ್ರತ್ಯೇಕತಾವಾದಿ ನಾಯಕ

ಗುರುವಾರ, 4 ಫೆಬ್ರವರಿ 2016 (18:54 IST)
ಕಳೆದ ತಿಂಗಳು ಮುಫ್ತಿ ಮೊಹಮ್ಮದ್ ಸಯೀದ್ ನಿಧನದ ನಂತರ ಜಮ್ಮು ಕಾಶ್ಮಿರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ರಚನೆಯಾಗದಿರುವ ಹಿನ್ನೆಲೆಯಲ್ಲಿ, ಯಾರನ್ನು ಗುರಿಯಾಗಿಸಿ ಪ್ರತಿಭಟನೆ ನಡೆಸಬೇಕು ಎನ್ನುವುದು ಕಾಶ್ಮಿರಿ ಪ್ರತ್ಯೇಕತಾವಾದಿಗಳ ಅಳಲಾಗಿದೆ.
 
ಪಿಡಿಪಿ ಪಕ್ಷದ ಮುಖ್ಯಸ್ಥೆಯಾದ ಮೆಹಬೂಬಾ ಮುಫ್ತಿ, ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸಿಕೊಂಡು ಸರಕಾರ ರಚಿಸುವಲ್ಲಿ ಮೀನಾಮೇಷ ಎಣಿಸುತ್ತಿರುವುದರಿಂದ ಸರಕಾರ ರಚನೆ ಕಾರ್ಯ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 
 
ಪ್ರತ್ಯೇಕತಾವಾದಿ ನಾಯಕ ಗಿಲಾನಿ ಮಾತನಾಡಿ, ನಮ್ಮ ಯುವಕರು ಪ್ರತಿಭಟನೆಗಾಗಿ ಸಿದ್ದವಾಗಿದ್ದಾರೆ. 50 ಮೀಟರ್ ದೂರದವರೆಗೆ ನಿಖರವಾಗಿ ಕಲ್ಲು ತೂರಾಟ ಮಾಡಬಲ್ಲವರಾಗಿದ್ದಾರೆ. ಆದರೆ, ಪ್ರತಿಭಟನೆ ನಡೆಸಲು ಮುಖ್ಯಮಂತ್ರಿ ಹುದ್ದೆ ಖಾಲಿಯಾಗಿರುವುದು ನಿರಾಸೆ ಮೂಡಿಸಿದೆ ಎಂದಿದ್ದಾರೆ. 
 
ಯಾವ ಪಕ್ಷಗಳು ಮೈತ್ರಿಯಾಗಿ ಸರಕಾರ ರಚಿಸುತ್ತವೆ ಎನ್ನುವದನ್ನು ನಾವು ಕೇರ್ ಮಾಡುವುದಿಲ್ಲ. ಯಾವುದಾದರೊಂದು ಸರಕಾರ ರಚಿಸಿ. ನಾವು ಪ್ರತಿಭಟನೆ ನಡೆಸಿದಲ್ಲಿ ಯಾರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೀರಿ ಎಂದು ಯಾರಾದರೂ ಕೇಳಿದರೆ ನಮ್ಮ ಬಳಿ ಉತ್ತರವಿಲ್ಲ ಎಂದು ದೂರಿದ್ದಾರೆ.
 
ಕೇಂದ್ರ ಸರಕಾರದ ವಿರುದ್ಧ ಯಾಕೆ ಪ್ರತಿಭಟಿಸುವುದಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಶೇಷ ಸಂದರ್ಭಗಳಲ್ಲಿ ಮಾತ್ರ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ನಮಗೆ ನೀತಿ ನಿಯಮಗಳಿವೆ ಎಂದು ಕಾಶ್ಮಿರಿ ಪ್ರತ್ಯೇಕತಾವಾದಿ ನಾಯಕ ಗಿಲಾನಿ ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ