ಯಾಕೂಬ್‌ಗೆ ಗಲ್ಲು; ಶಶಿ ತರೂರ್‌ಗೆ ಸಂಕಟ

ಗುರುವಾರ, 30 ಜುಲೈ 2015 (17:03 IST)
ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ನಲ್ಲಿ 1993ರ ಮುಂಬೈ ಸ್ಪೋಟದ ಪ್ರಮುಖ ಆರೋಪಿ ಯಾಕೂಬ್ ಮೆಮೊನ್‌‌ಗೆ ಗಲ್ಲು ಶಿಕ್ಷೆ  ನೀಡಿರುವುದರ ಕುರಿತಂತೆ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂಬುದು ಸ್ಪಷ್ಟವಾಗುತ್ತಿದೆ. ಪಕ್ಷ ಅಧಿಕೃತವಾಗಿ ಮೆಮೊನ್‌ಗೆ ಗಲ್ಲು ನೀಡಿರುವುದನ್ನು ಬೆಂಬಲಿಸಿದೆ. ಆದರೆ ಅದೇ ಪಕ್ಷದ ಪ್ರಮುಖ ನಾಯಕರಲ್ಲೊಬ್ಬರಾದ ಶಶಿ ತರೂರ್ ಯಾಕೂಬ್‌ನ್ನು ನೇಣಿಗೇರಿಸಿರುವುದರ ವಿರುದ್ಧವಾಗಿ ಟ್ವೀಟ್ ಮಾಡಿದ್ದಾರೆ. 
 
ನಮ್ಮ ಸರ್ಕಾರ ಮಾನವನ್ನು ಗಲ್ಲಿಗೇರಿಸಿದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
 
ತಮ್ಮ ಪಕ್ಷದ ನಾಯಕನ ಈ ವಿವಾದಾತ್ಮಕ ಹೇಳಿಕೆಯಿಂದ ಪಕ್ಷಕ್ಕಾಗುವ ಮುಜುಗರನ್ನು ತಪ್ಪಿಸಿಕೊಳ್ಳಲು ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಇದು ತರೂರ್ ವೈಯಕ್ತಿಕ ಅಭಿಪ್ರಾಯ. ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲವೆಂದಿದ್ದಾರೆ. 
 
ಆದರೆ ತಮ್ಮ ಟ್ವೀಟ್‌ ಫಲವಾಗಿ ಆಗಲಿರುವ ಅನಾಹುತವನ್ನು ಊಹಿಸಿದ ತರೂರ್, ಅದರಿಂದ ಬಚಾವ್ ಅಗುವ ಉದ್ದೇಶದಿಂದ, "ನಾನು ಯಾಕೂಬ್‌ಗೆ ನೇಣು ಹಾಕಿರುವುದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿಲ್ಲ. ಆದರೆ ನನಗೆ ಗಲ್ಲು ಶಿಕ್ಷೆ ನೀಡುವ ಪರಿಕಲ್ಪನೆಯೇ ಸರಿ ಎನ್ನಿಸುತ್ತಿಲ್ಲಠ, ಎಂದು  ಟ್ವೀಟ್ ಮಾಡಿದ್ದಾರೆ. ಅಲ್ಲದೇ ನೇಣು ಶಿಕ್ಷೆಯನ್ನು ತಾವು ವಿರೋಧಿಸುವುದಕ್ಕೆ  ಕಾರಣವನ್ನು ವಿವರಿಸಿ  ಮತ್ತೆ ಎರಡು ಟ್ವೀಟ್‌ಗಳನ್ನು ಅವರು ಪ್ರಕಟಿಸಿದ್ದಾರೆ. 
 
ಇತ್ತೀಚಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಮಾತನಾಡುತ್ತ ತರೂರ್ 200 ವರ್ಷಗಳ ಕಾಲ ನಮ್ಮ ದೇಶದಲ್ಲಿ ಆಳ್ವಿಕೆ ನಡೆಸಿ ದಬ್ಬಾಳಿಕೆ ನಡೆಸಿದ್ದ  ಬ್ರಿಟಿಷರು ಅದರಿಂದ ನಮಗಾದ ಪರಿಹಾರವನ್ನು ನೀಡಬೇಕೆಂಬ ವಿಶಿಷ್ಠ ಬೇಡಿಕೆಯನ್ನಿಟ್ಟಿದ್ದರು. ಅವರ ಈ ಭಾವೋದ್ರೇಕದ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹೊಗಳಿಕೆ ವ್ಯಕ್ತವಾಗಿತ್ತು. ಆದರೆ ಇಂದು ಅದೇ ಸಾಮಾಜಿಕ ಮಾಧ್ಯಮಗಳಲ್ಲಿ ಥರೂರ್ ವಿರುದ್ಧ ಆಕ್ರೋಶ ಪ್ರಕಟವಾಗುತ್ತಿದೆ. ಒಟ್ಟಿನಲ್ಲಿ ಆಗಾಗ ವಿವಾದಗಳನ್ನು ಎಳೆದುಕೊಳ್ಳುವುದು ತರೂರ್‌ ಖಯಾಲಿ ಎನ್ನಿಸುತ್ತಿದೆ.

ವೆಬ್ದುನಿಯಾವನ್ನು ಓದಿ