ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಸುಪ್ರೀಂಕೋರ್ಟ್ ತೀರ್ಪಿನಂತೆ ಕೂಡಲೇ ಬಂಧನಕ್ಕೊಳಗಾಗದಿದ್ದಲ್ಲಿ ವಾರಂಟ್ ಜಾರಿಗೊಳಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿಗಳಾದ ಶಶಿಕಲಾ, ಸುಧಾಕರನ್ ಮತ್ತು ಇಳವರಿಸಿ ಇಂದು ಅಥವಾ ನಾಳೆ ಬೆಂಗಳೂರಿನ ಹೈಕೋರ್ಟ್ ಮುಂದೆ ಹಾಜರಾಗಬೇಕಾದ ಅಗತ್ಯವಿದೆ. ಒಂದು ವೇಳೆ, ಕೋರ್ಟ್ ಮುಂದೆ ಹಾಜರಾಗುವಲ್ಲಿ ವಿಳಂಬ ತೋರಿದಲ್ಲಿ ಅವರ ವಿರುದ್ಧ ವಾರಂಟ್ ಹೊರಡಿಸಿ ಬಂಧನಕ್ಕೆ ಒಳಪಡಿಸಲಾಗುತ್ತದೆ ಎನ್ನಲಾಗಿದೆ.
ಬೆಂಗಳೂರಿನ ವಿಶೇಷ ನ್ಯಾಯಾಲಯದ ಮುಂದೆ ಅಪರಾಧಿಗಳು ಶರಣಾಗಬೇಕು ಎಂದು ಕೋರ್ಟ್ ಆದೇಶ ನೀಡಿದೆ. ಇದರಿಂದಾಗಿ ಶಶಿಕಲಾ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸುವುದರೊಂದಿಗೆ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.