ಶತ್ರುಘ್ನ ಸಿನ್ಹಾ -ನಿತೀಶ್ ಕುಮಾರ್ ಭೇಟಿ: ಬಿಜೆಪಿ ಪಾಳಯದಲ್ಲಿ ತಳಮಳ ಆರಂಭ

ಸೋಮವಾರ, 27 ಜುಲೈ 2015 (19:30 IST)
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್‌ರನ್ನು ಬಿಜೆಪಿ ಸಂಸದ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಭೇಟಿಯಾಗಿರುವುದು ಹಲವಾರು ಉಹಾಪೋಹಗಳಿಗೆ ಕಾರಣವಾಗಿದೆ. ಮುಂದಿನ ಭವಿಷ್ಯವನ್ನು ನೋಡಿದವರಾರು ಎಂದು ಸಿನ್ಹಾ ನೀಡಿರುವ ಹೇಳಿಕೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. 
 
ಮುಖ್ಯಮಂತ್ರಿ ನಿತೀಶ್ ಕುಮಾರ್ ನನ್ನ ವ್ಯಯಕ್ತಿಕ ಮತ್ತು ಫ್ಯಾಮಿಲಿ ಫ್ರೆಂಡ್ ಆಗಿದ್ದರಿಂದ ಅವರನ್ನು ಭೇಟಿಯಾಗಿದ್ದೇನೆ. ಯಾವಾಗಲು ಪರಸ್ಪರ ಭೇಟಿಯಾಗುತ್ತಿರುತ್ತೇವೆ. ಭೇಟಿ ಕುರಿತಂತೆ ಯಾಕೆ ಇಷ್ಟು ಉದ್ವೇಗ ಎಂದು ಸಿನ್ಹಾ ಪ್ರಶ್ನಿಸಿದ್ದಾರೆ.  
 
ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಹಾರ್ ರಾಜ್ಯಕ್ಕೆ ಭೇಟಿ ನೀಡಿದ ಕೆಲವೇ ಗಂಟೆಗಳಲ್ಲಿ ಸಿನ್ಹಾ ಮತ್ತು ನಿತೀಶ್ ಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 
 
ಮೋದಿ ಸಂಪುಟದಲ್ಲಿ ಸ್ಥಾನ ನೀಡಲಿಲ್ಲ ಎಂದು ಅಸಮಧಾನ ಗೊಂಡಿದ್ದಾರೆನ್ನಲಾದ ಸಿನ್ಹಾ, ನಿತೀಶ್ ಕುಮಾರ್ ನನಗೆ ಹಿರಿಯ ಸಹೋದರರಂತೆ. ನಾನು ಪಾಟ್ನಾಗೆ ಭೇಟಿ ನೀಡಿದಾಗಲೆಲ್ಲಾ ಒಂದು ಬಾರಿಯಾದರೂ ಪರಸ್ಪರ ಭೇಟಿಯಾಗುತ್ತೇವೆ. ಬೆಟ್ಟ ಕೊರೆದು ಇಲಿ ಹುಡುಕಿದಂತೆ ಮಾಧ್ಯಮಗಳು ವರ್ತಿಸುತ್ತಿವೆ ಎಂದು ತಿರುಗೇಟು ನೀಡಿದ್ದಾರೆ.  
 
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ತುಂಬಾ ಪ್ರತಿಭಾವಂತ ವ್ಯಕ್ತಿ. ನಾನು ಬಿಹಾರಿ ಬಾಬು ಆದ್ದರಿಂದ ಪರಸ್ಪರ ಆತ್ಮಿಯತೆ ಇದ್ದೇ ಇರುತ್ತದೆ ಎಂದು ತಿಳಿಸಿದ್ದಾರೆ.
 
ಬಿಜೆಪಿಯೊಂದಿಗಿನ ದೀರ್ಘಕಾಲದ ಸಂಬಂಧದ ಬಗ್ಗೆ ಮಾತನಾಡಿದ ಅವರು, ಬಿಹಾರ್‌ನಲ್ಲಿ ಕೇವಲ ಇಬ್ಬರು ಸಂಸದರಿದ್ದಾಗ ನಾನು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಪಕ್ಷದ ಕಷ್ಟ ಸುಖದಲ್ಲಿ ಭಾಗಿಯಾಗಿದ್ದೇನೆ. ಜೆಡಿಯು ಪಕ್ಷವನ್ನು ಸೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
 
ನಾಳೆ ಯಾರು ನೋಡಿದ್ದಾರೆ. ನಾಳೆ ನನ್ನನ್ನು ಬಿಜೆಪಿ ಪಕ್ಷದಿಂದ ಹೊರಹಾಕಬಹುದು. ಅಥವಾ ಪಕ್ಷದಲ್ಲಿ ನನ್ನನ್ನು ತುಳಿಯುವ ಪ್ರಯತ್ನಗಳು ಸಾಗಬಹುದು ಯಾರಿಗೆ ಗೊತ್ತು ಎಂದಿದ್ದಾರೆ.
 
ಬಿಜೆಪಿ ಪಕ್ಷ ನನ್ನನ್ನು ನಿರ್ಲಕ್ಷಿಸುತ್ತಿದೆ ಎನ್ನುವುದರಲ್ಲಿ ಸತ್ಯಾಂಶವಿಲ್ಲ. ಆದರೆ, ಕೆಲ ವ್ಯಕ್ತಿಗಳು ನನ್ನ ಜನಪ್ರಿಯತೆಯಿಂದಾಗಿ ನನ್ನ ವಿರುದ್ಧ ಸಂಚು ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ  ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ