ಶೀನಾ ಬೋರಾ ಹತ್ಯೆ ಪ್ರಕರಣ: ಆತ್ಮಹತ್ಯೆಗೆ ಯತ್ನಿಸಿದ್ದ ಇಂದ್ರಾಣಿ ಆರೋಗ್ಯದಲ್ಲಿ ಚೇತರಿಕೆ

ಶನಿವಾರ, 3 ಅಕ್ಟೋಬರ್ 2015 (10:15 IST)
ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಮೃತಳ ತಾಯಿ ಇಂದ್ರಾಣಿ ಮುಖರ್ಜಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಜೆಜೆ ಆಸ್ಪತ್ರೆಯ ಡೀನ್ ಡಾ.ಟಿ.ಪಿ ಲಹಾನೆ ತಿಳಿಸಿದ್ದಾರೆ.


 
ಹಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಅವರಿಗೆ ನಿನ್ನೆ ಅಚಾನಕ್ ಆಗಿ ಎದೆ ನೋವು ಕಾಣಿಸಿಕೊಂಡಿತು. ಬಳಿಕ ಅವರು ಪ್ರಜ್ಞೆ ಕಳೆದುಕೊಂಡರು. ತಕ್ಷಣ ಅವರನ್ನು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮುಂಬೈನ ಜೆ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ. 
 
ಹಲವು ಮಾತ್ರೆಗಳನ್ನು ಒಟ್ಟಿಗೆ ಸೇವಿಸಿರುವುದು ಪ್ರಾಥಮಿಕ ತಪಾಸಣೆ ವೇಳೆ ಖಚಿತಪಟ್ಟಿದ್ದು, ಆರೋಪಿ ಇಂದ್ರಾಣಿಯವರಿಗೆ ಅಪಸ್ಮಾರ ರೋಗವಿದ್ದು, ಅದಕ್ಕಾಗಿ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಶುಕ್ರವಾರ ಮಧ್ಯಾಹ್ನ ತಮ್ಮಲ್ಲಿದ್ದ ಎಲ್ಲ ಮಾತ್ರೆಗಳನ್ನು ಒಂದೇ ಬಾರಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ಅವರ ಸ್ಥಿತಿ ಗಂಭೀರವಾಗಿತ್ತು. ಇಂದು ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.
 
ಇಂದ್ರಾಣಿ ಸೇವಿಸಿದ್ದಾರೆ ಎನ್ನಲಾಗಿರುವ ಮಾತ್ರೆಗಳನ್ನು ತಪಾಸಣೆಗಾಗಿ ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಮಹಾರಾಷ್ಟ್ರ  ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತನಿಖೆಗೆ ಆದೇಶಿದ್ದಾರೆ.
 
ಇಂದ್ರಾಣಿ ಅವರ ಆರೋಗ್ಯ ವಿಚಾರಿಸಲು ಸಂಬಂಧಿಕರಲ್ಲಿ ಯಾರೂ ಆಸ್ಪತ್ರೆಗೆ ಭೇಟಿ ನೀಡಿಲ್ಲ. ನಿನ್ನೆ ರಾತ್ರಿ ಸಿಬಿಐ ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿತ್ತು .

ವೆಬ್ದುನಿಯಾವನ್ನು ಓದಿ