ಶೀನಾ ಹತ್ಯೆ: ಸುಳಿವು ನೀಡಿದ ಅನಾಮಿಕನ್ಯಾರು?

ಗುರುವಾರ, 3 ಸೆಪ್ಟಂಬರ್ 2015 (10:29 IST)
ಕ್ಷಣಕ್ಷಣಕ್ಕೂ ತಿರುವುಗಳನ್ನು ಪಡೆಯುತ್ತಿರುವ ಶೀನಾ ಬೋರಾ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು ದೂರವಾಣಿ ಕರೆ ಮಾಡಿ ಹತ್ಯೆ ಕುರಿತು ಮೊದಲ ಬಾರಿಗೆ ಸುಳಿವು ನೀಡಿದ ಅಪರಿಚಿತ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
 
ಅನಾಮಿಕ ವ್ಯಕ್ತಿಯೊಬ್ಬರು ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಅವರಿಗೆ ದೂರವಾಣಿ  ಕರೆ ಮಾಡಿ ಶೀನಾ ಕೊಲೆಯಾಗಿರುವುದ ಬಗ್ಗೆ ಸುಳಿವು ನೀಡಿದ್ದರು. ಆ ಕರೆ ಉತ್ತರಪ್ರದೇಶದಿಂದ ಬಂದಿದೆಂಬುದನ್ನಷ್ಟೇ ಪೊಲೀಸರು ಕಂಡುಕೊಂಡಿದ್ದು ಕರೆ ಮಾಡಿದ್ದು ಯಾರು ಎಂಬುದು ಇನ್ನುವರೆಗೂ ಪತ್ತೆಯಾಗಿಲ್ಲ. ಆ ವ್ಯಕ್ತಿಯಿಂದ ಮಹತ್ವದ ಸುಳಿವು ಸಿಗಬಹುದೆಂಬ ಕಾರಣಕ್ಕೆ ಪೊಲೀಸರು ಹುಡುಕಾಟ ಕೈಗೊಂಡಿದ್ದು, ಆ ವ್ಯಕ್ತಿ ಪ್ರಕರಣದ ಪ್ರತ್ಯಕ್ಷದರ್ಶಿಯಾಗಿರಬೇಕೆಂದು ಪೊಲೀಸರು ಊಹಿಸಿದ್ದಾರೆ. 
 
ಇಷ್ಟು ದಿನ ಶೀನಾ ಬದುಕಿದ್ದಾಳೆ, ಅಮೇರಿಕದಲ್ಲಿದ್ದಾಳೆ ಎಂದು ಹೇಳುವುದರ ಮೂಲಕ ಪೊಲೀಸರನ್ನು ಗೊಂದಲಕ್ಕೀಡು ಮಾಡಿದ್ದ ಇಂದ್ರಾಣಿ ಈಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. 
 
ನಿನ್ನೆ ಇಡೀ ಇಂದ್ರಾಣಿ ಪತಿ ಸ್ಟಾರ್ ಇಂಡಿಯಾದ ಮಾಜಿ ಸಿಇಒ ಪೀಟರ್ ಮುಖರ್ಜಿಯನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇಂದು ಸಹ ಪತ್ನಿ ಮತ್ತು ಇತರ ಆರೋಪಿಗಳ ಸಮ್ಮುಖದಲ್ಲಿ ಪೀಟರ್ ವಿಚಾರಣೆ ಮುಂದುವರೆಯಲಿದೆ. 

ವೆಬ್ದುನಿಯಾವನ್ನು ಓದಿ