ಹೊರರಾಜ್ಯಗಳ ಚುನಾವಣೆಗಳಲ್ಲಿ ಶಿವಸೇನೆ ಸ್ಪರ್ಧೆಗೆ ಚಿಂತನೆ: ಠಾಕ್ರೆ

ಗುರುವಾರ, 12 ನವೆಂಬರ್ 2015 (14:57 IST)
ಬಿಹಾರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಸಾಧನೆಯಿಂದ ಉತ್ತೇಜಿತಗೊಂಡ ಪಕ್ಷದ ಮುಖ್ಯಸ್ಥ ಉದ್ಭವ್ ಠಾಕ್ರೆ, ಹೊರರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
 
ಶಿವಸೇನೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಪಕ್ಷವಾಗಿದ್ದರೂ ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಆದರೆ, ಯಾವುದೇ ಕ್ಷೇತ್ರ ಗೆಲ್ಲುವಲ್ಲಿ ವಿಫಲವಾಗಿತ್ತು.
 
ಬಿಹಾರ್‌ನಲ್ಲಿ ಬಿಜೆಪಿ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಠಾಕ್ರೆ, ಬಿಹಾರ್ ಸೋಲಿನ ಬಗ್ಗೆ ಬಿಜೆಪಿ ಸಂಸದರು, ಶಾಸಕರು ಈಗಾಗಲೇ ಹೇಳಿಕೆ ನೀಡಿದ್ದರಿಂದ ನಾನು ಹೇಳಿಕೆ ನೀಡುವ ಅಗತ್ಯವಿಲ್ಲ ಎಂದರು.
 
ಕಲ್ಯಾಣ ಮೇಯರ್ ಸ್ಥಾನಕ್ಕೆ ರಾಜೇಂದ್ರ ದೇವ್ಲೆಕರ್ ಅವರನ್ನು ಶಿವಸೇನೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರ ರಾಜ್ಯಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಗಂಭೀರವಾಗಿ ಆಲೋಚಿಸಿರಲಿಲ್ಲ. ಹಿಂದುತ್ವವಾದಿಗಳನ್ನು ಸೆಳೆಯಲು ಹೊರ ರಾಜ್ಯಗಳ ಚುನಾವಣೆಗೆ ಸ್ಪರ್ಧಿಸಲು ಇದೀಗ ಚಿಂತನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.  
 
ಬಿಹಾರ್ ಚುನಾವಣೆ ಸಂದರ್ಭದಲ್ಲಿ ನಾನು ಬಿಹಾರ್ ರಾಜ್ಯಕ್ಕೆ ಭೇಟಿ ನೀಡಲಿಲ್ಲ. ಆದರೆ, ಶಿವಸೇನೆ ನಾಯಕರಾದ ಸಂಜಯ್ ರಾವುತ್ ಸೇರಿದಂತೆ ಹಲವರು ಪ್ರಚಾರ ಮಾಡಿದ್ದರು. ಚುನಾವಣೆಯಲ್ಲಿ ಶಿವಸೇನೆಗೆ ಎರಡು ಲಕ್ಷ ಮತಗಳು ಬಂದಿವೆ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಸಂತಸ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ