ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಬಹಿಷ್ಕಾರಕ್ಕೆ ಶಿವಸೇನೆ ಕರೆ

ಸೋಮವಾರ, 12 ಅಕ್ಟೋಬರ್ 2015 (14:19 IST)
ಮಹಾರಾಷ್ಟ್ರದ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟದ ಬಿರುಕು ದಿನದಿಂದ ದಿನಕ್ಕೆ ಹೆಚ್ಚಾಗುವ ಲಕ್ಷಣಗಳು ಕಂಡುಬರುತ್ತಿವೆ. ಇದೀಗ ಪ್ರಧಾನಿ ನರೇಂದ್ರ ಮೋದಿಯ ಸಮಾರಂಭಗಳನ್ನು ಬಹಿಷ್ಕರಿಸುವಂತೆ ಶಿವಸೇನೆ ತನ್ನ ಪಕ್ಷದ ನಾಯಕರಿಗೆ ತಾಕೀತು ಮಾಡಿದೆ.
 
ನಿನ್ನೆ ಪ್ರಧಾನಿ ಮೋದಿ ಪಾಲ್ಗೊಂಡಿದ್ದ ಸಭೆಗೆ ಶಿವಸೇನೆ ನಾಯಕರು ಬಹಿಷ್ಕಾರ ಹಾಕಿ ತಮ್ಮ ಅತೃಪ್ತಿಯನ್ನು ಹೊರಹಾಕಿದ್ದರು.
 
ಪರೇಲ್‌ನಲ್ಲಿ ಆಯೋಜಿಸಲಾಗಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮೆಮೋರಿಯಲ್ ಫೌಂಡೇಶನ್ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆಯವರಿಗೆ ವಿಳಂಬವಾಗಿ ಆಹ್ವಾನ ನೀಡಲಾಯಿತು ಎಂದು ಶಿವಸೇನೆ ನಾಯಕರು ಆಕ್ರೋಶ ವ್ಯಕ್ತಪಡಿಸಿ, ಪ್ರಧಾನಿ ಮೋದಿಯವರ ಎಲ್ಲಾ ಕಾರ್ಯಕ್ರಮಗಳನ್ನು ಬಹಿಷ್ಕರಿಸುವಂತೆ ಶಿವಸೇನೆ ಕರೆ ನೀಡಿದ್ದರು.
 
ನಮಗೆ ಅಧಿಕಾರದ ದಾಹವಿಲ್ಲ. ರೈತರಿಗೆ ಸೇವೆ ನೀಡಲು ಬದ್ಧವಾಗಿದ್ದೇವೆ. ನಮ್ಮ ಪಕ್ಷ ಬಹುಮತಗಳಿಸಿ ಅಧಿಕಾರಕ್ಕೆ ಬಂದಿದ್ದಲ್ಲಿ ಮತ್ತಷ್ಟು ರೈತರ ಸೇವೆಗೆ ಅನುಕೂಲವಾಗುತ್ತಿತ್ತು ಎಂದು ಉದ್ಭವ್ ಠಾಕ್ರೆ ಮೈತ್ರಿಕೂಟವಾದ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.   
 

ವೆಬ್ದುನಿಯಾವನ್ನು ಓದಿ