ಶಿವಸೇನೆಯ ಶೈಲಿ ಅನುಸರಿಸಿದ್ದಕ್ಕೆ ಮೋದಿ ಗೆದ್ದದ್ದು, ಇಲ್ಲಾಂದ್ರೆ ಅವರಪ್ಪನು ಗೆಲ್ಲಲಾಗುತ್ತಿರಲಿಲ್ಲ: ಉದ್ಧವ್ ಠಾಕ್ರೆ

ಮಂಗಳವಾರ, 14 ಅಕ್ಟೋಬರ್ 2014 (18:19 IST)
ಮಾಜಿ ಮಿತ್ರ ಪಕ್ಷ ಬಿಜೆಪಿಯ ಮೇಲೆ ಬಿರುಸಿನ ಪ್ರಹಾರ ನಡೆಸಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಬಹಳ ಕೆಳಮಟ್ಟದ ವೈಯಕ್ತಿಕ ದಾಳಿಯನ್ನು ನಡೆಸಿದ್ದು, ಮೋದಿ ತಂದೆಯವರ ಹೆಸರನ್ನು ಕೂಡ ಎಳೆದು ತಂದಿದ್ದಾರೆ. 

ಪ್ರಧಾನಿಯಾದಾಗಿನಿಂದ ಮೋದಿ ಮಹಾರಾಷ್ಟ್ರದ ಪಕ್ಷ (ಶಿವಸೇನೆ)ವನ್ನು ಗುರುತಿಸುತ್ತಿಲ್ಲ ಎಂದವರು ತಮ್ಮ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಆಪಾದಿಸಿದ್ದಾರೆ.
 
ಚುನಾವಣೆಗಳನ್ನು ಗೆಲ್ಲಲು ಮೋದಿ ಶಿವಸೇನೆಯ ಶೈಲಿಯನ್ನು ಅನುಸರಿಸಿದ್ದಾರೆ ಎಂದು ಹೇಳಿರುವ ಸೇನಾ ಮುಖ್ಯಸ್ಥ, ಹಾಗಿಲ್ಲದಿದ್ದರೆ ಮೋದಿ ಯಾಕೆ, ಅವರಪ್ಪ ದಾಮೋದರ್ ದಾಸ್ ಕೂಡ ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ತೀರ ಕೆಳಮಟ್ಟದ ವೈಯಕ್ತಿಕ ಟೀಕೆ ಮಾಡಿದ್ದಾರೆ. 
 
ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 15 ರಂದು ಚುನಾವಣೆ ನಿಗದಿಯಾಗಿದ್ದು, ಕಳೆದ ಸೋಮವಾರ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಯಿತು. 
 
ತಮ್ಮ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಗಳನ್ನು  'ಸತ್ತ ಹಾವು'ಗಳಿಗೆ  ಹೋಲಿಸಿದ ಠಾಕ್ರೆ ಬಿಜೆಪಿ ತಮ್ಮ ಪಕ್ಷದ ನಂಬರ್ 1 ಶತ್ರು ಎಂದು ಹೇಳಿದ್ದಾರೆ. 
 
ಬಿಜೆಪಿಯನ್ನು ಅಧಿಕಾರದ ಹಸಿವಿರುವ ಪಕ್ಷ ಎಂದು ಜರಿದ ಠಾಕ್ರೆ ಬಿಜೆಪಿ ಉದ್ದೇಶ ಶಿವಸೇನೆಯನ್ನು ಸೋಲಿಸುವುದು . ಆ ಹಸಿವೇ ಅವರನ್ನು ಶಿವಸೇನೆ ಜತೆಗಿನ 25 ವರ್ಷಗಳ ದೀರ್ಘ ಮೈತ್ರಿಯನ್ನು ಮುರಿದು ಏಕಾಂಗಿಯಾಗಿ ಕಣಕ್ಕಿಳಿಯಲು  ಪ್ರೇರೇಪಿಸಿತು ಎಂದು ಅವರು ಆಪಾದಿಸಿದ್ದಾರೆ. 
 
ಮಹಾರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಂದ ಪ್ರಚಾರ ಮಾಡಿಸುವ ಅಗತ್ಯ ಬಿಜೆಪಿಗೆ ಏಕೆ ಮೂಡಿತು ಎಂಬುದಕ್ಕೆ ಅವರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ