ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾದ ಪ್ರಧಾನಿ ಮೋದಿ: ಶಿವಸೇನೆ

ಶನಿವಾರ, 30 ಜನವರಿ 2016 (16:43 IST)
ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಬಿಜೆಪಿ ಮಿತ್ರಪಕ್ಷವಾದ ಶಿವಸೇನೆ ವಾಗ್ದಾಳಿ ನಡೆಸಿದೆ.
 
ಪ್ರಧಾನಿ ಮೋದಿಗೆ ಗುಜರಾತ್‌ನಲ್ಲಿ ಮಾಡಿದ ಸಾಧನೆಗಳನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸುವಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಘೋಷಣೆಗಳನ್ನು ಮಾಡಲಾಗುತ್ತದೆ, ಒಳ್ಳೆಯ ದಿನಗಳು ಬರಲಿವೆ ಎಂದು (ಅಚ್ಚೇದಿನ್‌) ಭರವಸೆಗಳನ್ನು ನೀಡಲಾಗುತ್ತಿದೆ. ಆದರೆ, ಯಾವುದೂ ಜಾರಿಗೆ ಬರುತ್ತಿಲ್ಲ ಎಂದು ಶಿವಸೇನೆ ತನ್ನ ಮುಖವಾಣಿ ಪತ್ರಿಕೆ ಸಾಮ್ನಾದಲ್ಲಿ ಪ್ರಕಟಿಸಿದೆ.
 
ಇದೀಗ ಅಸಮರ್ಥ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಆದೇಶ ನೀಡಿದ್ದಾರೆ. ಆದರೆ, ದಕ್ಷ ಅಧಿಕಾರಿಗಳಿಗೆ ಸರಕಾರದಿಂದ ಬೆಂಬಲ ದೊರೆಯುತ್ತಿಲ್ಲ. ಒಂದು ವೇಳೆ, ಒಳ್ಳೆಯ ದಿನಗಳು ಬಂದಲ್ಲಿ ಜನತೆಗೆ ಸಂತಸವಾಗಲಿದೆ ಎಂದು ಹೇಳಿದೆ.
 
ಅಧಿಕಾರಿ ವರ್ಗ, ಪ್ರಧಾನಿ ಮೋದಿ ಸಶಕ್ತ ಮತ್ತು ಅತಿ ಜನಪ್ರಿಯ ಪ್ರಧಾನಿ ಎಂದು ಭಾವಿಸುತ್ತದೆ. ಆದಾಗ್ಯೂ, ಮೋದಿಗೆ ಅಧಿಕಾರಿಗಳಿಂದ ಸಮಸ್ಯೆಗಳು ಎದುರಾಗಿವೆ ಎಂದು ವ್ಯಂಗ್ಯವಾಡಿದೆ.
 
ದೇಶದ ಜನತೆಗೆ ಒಳ್ಳೆಯ ದಿನಗಳು ಬರದಿರುವುದಕ್ಕೆ ಅಧಿಕಾರಿಗಳೇ ಅಡ್ಡಿಯಾಗಿದ್ದಾರೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಕಳೆದ ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ಮೋದಿ ಸರಕಾರ, ಭ್ರಷ್ಟಾಚಾರ, ಹಣದುಬ್ಬರ, ಭಯೋತ್ಪಾದನೆ, ಆರ್ಥಿಕತೆ, ರೈತರ ಸಮಸ್ಯೆ, ನಿರುದ್ಯೋಗ ಸಮಸ್ಯೆಗಳಿಗೆ ಸ್ಪಂದಿಸದೆ ಅಧಿಕಾರಿಗಳನ್ನು ಹೊಣೆಯಾಗಿಸುತ್ತಿದೆ ಎಂದು ಶಿವಸೇನೆ ಕಿಡಿಕಾರಿದೆ.

ವೆಬ್ದುನಿಯಾವನ್ನು ಓದಿ