ಆಘಾತಕಾರಿ: 3 ಗಂಟೆಗಳ ಕಾಲ ಶಾಲಾ ಕೊಠಡಿಯಲ್ಲಿ ಬಂಧಿಯಾದ 6 ವರ್ಷದ ಮಗು

ಶುಕ್ರವಾರ, 3 ಜುಲೈ 2015 (17:50 IST)
6 ವರ್ಷದ ಬಾಲಕಿ ಶಾಲಾ ಕೊಠಡಿಯಲ್ಲಿ 3 ಗಂಟೆಗಳ ಕೂಡಿ ಹಾಕಲ್ಪಟ್ಟ ದಾರುಣ ಘಟನೆ ಓಡಿಶಾದಲ್ಲಿ ನಡೆದಿದೆ. ಆ ಸಮಯದಲ್ಲಿ ಶಾಲಾ ಕಟ್ಟಡದಲ್ಲಿ ಮತ್ಯಾರೂ ಇರಲಿಲ್ಲವೆಂಬುದು ಮತ್ತೂ ಭಯಾನಕ ಸಂಗತಿ. 
 
ಬೆದರಿದ ಬಾಲಕಿ ತಾನು ಸತ್ತೇ ಹೋಗುತ್ತೇನೆ ಎಂದು ಅಂಜಿದ್ದಾಳೆ. ಸಹಾಯಕ್ಕಾಗಿ ಕಿರುಚಿದ್ದಾಳೆ. ಆದರೆ 3 ಗಂಟೆಗಳ ಕಾಲ ಆಕೆಯ ಸಹಾಯಕ್ಕೆ ಯಾರು ಕೂಡ ಬರಲಿಲ್ಲ. 
 
ಮಗಳು ಶಾಲೆಯಿಂದ ಮರಳಿಲ್ಲ ಎಂಬ ಆತಂಕಕ್ಕೆ ಒಳಗಾದ ಪೋಷಕರು ಹುಡುಕುತ್ತ ಶಾಲೆಯ ಬಳಿ ಬಂದಾಗ ಈ ಕರಾಳ ಘಟನೆ ಬೆಳಕಿಗೆ ಬಂದಿದೆ. 
 
ಖಾರಿನಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಡಿ ಬರುವ ಹರಿಯಾಬಂಕಾದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.  ಶನಿವಾರ ಮಧ್ಯಾಹ್ನ ಶಾಲಾವಧಿ ಮುಗಿದ ಮೇಲೆ ಶಿಕ್ಷಕರು ಎಲ್ಲ ತರಗತಿಗಳ ಬೀಗ ಹಾಕಿ ಮನೆಗೆ ಹೋಗಿದ್ದಾರೆ. ಆದರೆ ಕೊಠಡಿಯೊಂದರಲ್ಲಿ 6 ವರ್ಷದ ಮಗು ಬಂಧಿಯಾಗಿಬಿಟ್ಟಿದೆ. ತಾನು ಒಬ್ಬಳೇ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದು ಮಗುವಿಗೆ ಅರಿವಾಗುವಷ್ಟರಲ್ಲಿ ಎಲ್ಲರೂ ಹೊರಟು ಹೋಗಿಯಾಗಿತ್ತು. 3 ಗಂಟೆಗಳ ಕಾಲ ಮಾತ್ರ ಮಗುವಿಗೆ ಅತ್ಯಂತ ಭಯಾನಕವಾಗಿತ್ತು. 
 
ಮಗುವಿನ ಕಿರುಚಾಟವನ್ನು ಕೇಳಿದ ಸ್ಥಳೀಯರು ಕೊಠಡಿಯ ಬಾಗಿಲು ಮುರಿದು ಆಕೆಯನ್ನು ಹೊರ ಕರೆತಂದಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದ್ದು ಪ್ರತಿಭಟನೆ ಕೈಗೊಂಡ ಗ್ರಾಮಸ್ಥರು ಶಾಲೆಯ ಶಿಕ್ಷಕ, ಶಿಕ್ಷಕಿಯರನ್ನು ಸೋಮವಾರ ಶಾಲೆಯ ಒಳಗೆ ಪ್ರವೇಶಿಸಲು ಬಿಡಲಿಲ್ಲ. ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. 
 
ನಿರ್ಲಕ್ಷದಿಂದ ಮಗುವನ್ನು ಕೂಡಿ ಹಾಕಿದ ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ