ಠಾಣೆಯೊಳಗೆ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪೊಲೀಸರು

ಶುಕ್ರವಾರ, 24 ಏಪ್ರಿಲ್ 2015 (14:39 IST)
ಮೂವರು ಪೊಲೀಸರು ಠಾಣೆಯೊಳಗೆ ಮಾಡೆಲ್ ಒಬ್ಬರ ಮೇಲೆ ಅತ್ಯಾಚಾರ ಎಸಗಿದ ಮತ್ತು ಹಣ ಸುಲಿಗೆ ಮಾಡಿದ ಆಘಾತಕಾರಿ ಪ್ರಕರಣ ಮುಂಬೈನಲ್ಲಿ ವರದಿಯಾಗಿದೆ.  

28 ವರ್ಷದ ಮಾಡೆಲ್ ಮೇಲೆ ಅತ್ಯಾಚಾರ ಎಸಗಿದ ಮತ್ತು 4.5 ಲಕ್ಷ ರೂಪಾಯಿ ಹಣವನ್ನು ಕಿತ್ತುಕೊಂಡ ಆರೋಪದ ಮೇಲೆ ಇಬ್ಬರು ಸಹಾಯಕ ಇನ್ಸಪೆಕ್ಟರ್, ಒಬ್ಬ ಪೊಲೀಸ್ ಪೇದೆ ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಲಾಗಿದೆ. 
 
ಶೂಟಿಂಗ್ ನಿಮಿತ್ತ ಪಂಚತಾರಾ ಹೋಟೆಲಿಗೆ ತೆರಳಿದ್ದ ಮಾಡೆಲ್ ಒಬ್ಬಳನ್ನು ವೇಶ್ಯಾವಾಟಿಕೆ ಕೇಸ್ ಹಾಕುವುದಾಗಿ ಬೆದರಿಸಿ ಠಾಣೆಗೆ ಕರೆದುಕೊಂಡು ಹೋದ ಪೊಲೀಸರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ.
 
ಮಾಡೆಲ್ ಘಟನೆಯ ಕುರಿತು ಮುಂಬೈ ಪೊಲೀಸ್ ಕಮೀಷನರ್ ರಾಕೇಶ್ ಮಾರಿಯ ಅವರಿಗೆ ಸಂದೇಶ ಕಳುಹಿಸಿದ್ದು, ಆ ನಂತರ ಆರೋಪಿಗಳನ್ನು ಬಂಧಿಸಲಾಗಿದೆ. ನಂತರ ಅವರ ಸೂಚನೆ ಮೇರೆಗೆ  ತನ್ನ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗಳು, ಒಬ್ಬ ಪೇದೆ ಹಾಗೂ ಇತರೆ ಮೂವರ ವಿರುದ್ದ ದೂರು ದಾಖಲಿಸಿದ್ದಾಳೆ.
 
ಪೀಡಿತಳ ಪ್ರಕಾರ ಏಪ್ರಿಲ್ 3 ರಂದು  ಚಲನಚಿತ್ರವೊಂದರ ಆಡಿಷನ್‌ಗೆಂದು ಗೆಳೆಯನ ಜತೆಯಲ್ಲಿ ಆಕೆ ಪಂಚತಾರಾ ಹೊಟೆಲ್ ಒಂದಕ್ಕೆ ಹೋಗಿದ್ದಳು. ಆಕೆ ಹೋಟೆಲಿನಿಂದ ಹೊರಬರುತ್ತಿದ್ದಂತೆ ಪೊಲೀಸ್ ಜೀಪಿನಲ್ಲಿ ಬಂದ 6 ಜನ ( ಅದರಲ್ಲಿ ಮೂವರು ಪೊಲೀಸರು) ನೀನೀಗಲೇ ಠಾಣೆಗೆ ಬರಬೇಕು, ಇಲ್ಲವಾದರೆ ಸುಳ್ಳು ಪ್ರಕರಣವನ್ನು ದಾಖಲಿಸುತ್ತೇವೆ ಎಂದು ಬೆದರಿಸಿ ಆಕೆಯನ್ನು ಬಲವಂತವಾಗಿ ತಮ್ಮ ವಾಹನದಲ್ಲಿ ಕೂರಿಸಿಕೊಂಡು ಅಂಧೇರಿಯಲ್ಲಿನ ಸಾಕಿನಾಕಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಠಾಣೆಯಲ್ಲಿಯೇ ಆಕೆಯ ಮೇಲೆ ರಾತ್ರಿ ಪೂರ್ತಿ ಅತ್ಯಾಚಾರವೆಸಗಿದ್ದಾರೆ. ಬಳಿಕ ಆಕೆಯನ್ನು ಬಿಡುಗಡೆ ಮಾಡಲು 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯನ್ನು ಸಹ ಇಟ್ಟ ಆರೋಪಿಗಳು ಆಕೆಯ ಗೆಳೆಯ ಬಂದು ಅಷ್ಟು ಹಣವನ್ನು ಪಾವತಿಸಿದ ನಂತರ ಆಕೆಯನ್ನು ಬಂಧಮುಕ್ತಗೊಳಿಸಿದ್ದಾರೆ. 
 
ಅ ರಾತ್ರಿಯಲ್ಲಿಯೇ ತನ್ನ ಗೆಳೆಯನಿಗೆ ಫೋನ್ ಮಾಡಿದ ಮಾಡೆಲ್ ಅವನ ಮೂಲಕ 4.5 ಲಕ್ಷ ರೂ.ಗಳನ್ನು ತರಿಸಿಕೊಂಡು ಪೊಲೀಸರಿಗೆ ನೀಡಿದ್ದಳೆನ್ನಲಾಗಿದೆ. ಬಳಿಕ ಮುಂಬೈನಿಂದ ತೆರಳಿದ್ದ ಈ ಮಾಡೆಲ್ ನಡೆದ ವಿಷಯವನ್ನು ಮುಂಬೈ ಪೊಲೀಸ್ ಕಮೀಷನರ್ ರಾಕೇಶ್ ಮಾರಿಯರಿಗೆ ಮೆಸೇಜ್ ಮಾಡಿ ತಿಳಿಸಿದ್ದು, ಇದೀಗ ಆರೋಪಿ ಪೊಲೀಸರ ವಿರುದ್ದ ಅತ್ಯಾಚಾರದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
ಈ ಘಟನೆಯಿಂದ ಆಘಾತಕ್ಕೊಳಗಾದ ಆಕೆ ನಗರವನ್ನು ಬಿಟ್ಟು ಹೊರಟು ಹೋದಳು. ಆದರೆ ಕೊನೆಗೆ ಧೈರ್ಯ ಮಾಡಿ ಪೊಲೀಸ್ ಕಮಿಷನರ್ ಬಳಿ ತನಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾಳೆ. 
 
ಆಕೆಯ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದ್ದು ಘಟನೆಯ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ