ರಿಯಲಿಟಿ ಶೋನಲ್ಲಿ ಪಾಲ್ಗೊಳ್ಳಲು ಇಬ್ಬರ ಹತ್ಯೆ ಮಾಡಿದ 17ರ ಹದಿಹರೆಯದ ಯುವಕ

ಶುಕ್ರವಾರ, 5 ಫೆಬ್ರವರಿ 2016 (14:57 IST)
ಉತ್ತಮ ನಡತೆ ಆಧಾರದ ಮೇಲೆ ರಿಮ್ಯಾಂಡ್‌ ಹೋಂ ನಿಂದ ಬಿಡುಗಡೆಯಾಗಿದ್ದ 17 ವರ್ಷ ವಯಸ್ಸಿನ ಹದಿಹರೆಯದ ಯುವಕ ಮತ್ತೆ ಹಿರಿಯ ಮಹಿಳೆಯನ್ನು ಹತ್ಯೆ ಮಾಡಿ ಪೊಲೀಸರಿಂದ ಬಂಧಿತನಾಗಿದ್ದಾನೆ.
 
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 13 ವರ್ಷದ ಬಾಲಕನನ್ನು ಅಪಹರಿಸಿ ಹತ್ಯೆಗೈದ ಆರೋಪದ ಮೇಲೆ ಆರೋಪಿಯನ್ನು ರಿಮ್ಯಾಂಡ್‌ ಹೋಮ್‌ಗೆ ಕಳುಹಿಸಲಾಗಿತ್ತು. ಎರಡು ತಿಂಗಳ ಹಿಂದಷ್ಟೆ ಉತ್ತಮ ನಡತೆಗಾಗಿ ಆತನನ್ನು ಬಿಡುಗಡೆಗೊಳಿಸಲಾಗಿತ್ತು.
 
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಯುವಕ, ದಕ್ಷಿಣ ದೆಹಲಿಯ ನಿವಾಸಿಯಾಗಿದ್ದ 65 ವರ್ಷದ ಮಹಿಳೆ ಮಿಥಿಲೇಷ್ ಜೈನ್‌ರನ್ನು ಕತ್ತು ಹಿಸುಕಿ ಕೊಲೆ ಮಾಡಿ ನಗದು, ಚಿನ್ನಾಭರಣ ಮತ್ತು ಎರಡು ಮೊಬೈಲ್ ಫೋನ್‌ಗಳೊಂದಿಗೆ ಪರಾರಿಯಾಗಿದ್ದ.  
 
ಆರೋಪಿ ಯುವಕ ತಾನು ಕದ್ದ ಮೊಬೈಲ್‌ಗಳನ್ನು ಸ್ವಿಚ್ ಆನ್ ಮಾಡಿದಾಗ ಫೋನ್ ಕರೆಗಳನ್ನು ಟ್ರೇಸ್ ಮಾಡುತ್ತಿದ್ದ ಪೊಲೀಸರಿಗೆ ಆರೋಪಿ ಫರೀದಾಬಾದ್‌ನ ನಿವಾಸದಲ್ಲಿರುವುದು ಪತ್ತೆಯಾಗಿದೆ. ಕೂಡಲೇ ಪೊಲೀಸರು ಆತನ ನಿವಾಸದ ಮೇಲೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
 
ಯುವಕ ತನ್ನ ಗೆಳತಿಯೊಂದಿಗೆ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಗತ್ಯವಾಗಿರುವ ಹಣಕ್ಕಾಗಿ ಮಹಿಳೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಆರು ತಿಂಗಳಲ್ಲಿ ಎರಡು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಯುವಕನ ವಿರುದ್ಧ ಇದೀಗ ವಯಸ್ಕರ ಕಾನೂನಿನ ಪ್ರಕಾರ ಶಿಕ್ಷೆಗೊಳಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ