ಹುತಾತ್ಮ ಹನುಮಂತಪ್ಪ; ಪರೇಡ್ ಮೈದಾನದಲ್ಲಿ ಅಂತಿಮ ನಮನ

ಗುರುವಾರ, 11 ಫೆಬ್ರವರಿ 2016 (16:20 IST)
ಹುತಾತ್ಮ ಹನುಮಂತಪ್ಪ ಕೊಪ್ಪದ್ ಅವರ ಶರೀರವನ್ನು ಆರ್‌ಆರ್ ಆಸ್ಪತ್ರೆಯಿಂದ ನವದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಪರೇಡ್ ಮೈದಾನಕ್ಕೆ ಸ್ಥಳಾಂತರಿಸಲಾಗಿದ್ದು ಸಂಜೆ 4.30ಕ್ಕೆ ಪೆರೇಡ್ ಗ್ರೌಂಡ್‌ನಲ್ಲಿ ಅವರಿಗೆ ಸೇನಾಗೌರವ ಸಲ್ಲಿಸಲಾಗುವುದು ಎಂದು ತಿಳಿದು ಬಂದಿದೆ. ರಕ್ಷಣಾ ಸಚಿವ ಮನೋಹರ ಪರಿಕ್ಕರ್, ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನವನ್ನು ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. 

ಪ್ರಧಾನಿ ಮೋದಿಯವರು ಸಹ ಯೋಧನ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಆಗಮಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. 
 
ಅಂತಿಮ ಗೌರವ ಸಲ್ಲಿಸಿದ ಬಳಿಕ ಸಂಜೆ 7 ಗಂಟೆಗೆ  ಪಾಲಂ ಟೆಕ್ನಿಕಲ್ ಏರ್‌ಪೋರ್ಟ್‌ನಿಂದ ಸೇನಾ ವಿಮಾನದಲ್ಲಿ ಅವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿಗೆ ರವಾನಿಸಲಾಗುವುದು. ರಾತ್ರಿ 9.30 ಕ್ಕೆ ವಿಮಾನ ಹುಬ್ಬಳ್ಳಿಯನ್ನು ತಲುಪಲಿದೆ ಎಂದು ಹೇಳಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ, ವಿಮಾನ ನಿಲ್ದಾಣಕ್ಕೆ ತೆರಳಿ ಖುದ್ದು ಯೋಧನ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
 
ಅವರ ಪಾರ್ಥಿವ ಶರೀರದ ಜತೆಗೆ ಸೇನಾ ನಾಯಕರು ಬರುತ್ತಿದ್ದು, ಕುಟುಂಬದ ಸದಸ್ಯರು ಸಹ ಹುಬ್ಬಳ್ಳಿಗೆ ವಾಪಸ್ಸಾಗಲಿದ್ದಾರೆ.  

ವೆಬ್ದುನಿಯಾವನ್ನು ಓದಿ