ವಾರಣಾಸಿ ಗಲಭೆ: 50 ಮಂದಿ ಪ್ರತಿಭಟನಾಕಾರರ ಬಂಧನ

ಮಂಗಳವಾರ, 6 ಅಕ್ಟೋಬರ್ 2015 (20:43 IST)
ಗಂಗೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ನಿಷೇಧ ಹೇರಿದ ಜಿಲ್ಲಾಡಳಿತದ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆ, ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು 50 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. 
 
ವಾರಣಾಸಿ ಜಿಲ್ಲಾಧಿಕಾರಿ ರಾಜ್‌ಮಣಿ ಯಾದವ್ ನಿರ್ದೇಶನದ ಮೇರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರದಲ್ಲಿ ಕೆಲವು ವಿದೇಶಿ ಪ್ರವಾಸಿಗರನ್ನು ಹೊರತುಪಡಿಸಿ ಜನ ಸಂಚಾರ ನೀರಸವಾಗಿತ್ತು ಎಂದು ಮೂಲಗಳು ತಿಳಿಸಿವೆ.  
 
ನಗರಾದ್ಯಂತ ಭಾರಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಶಾಂತಿಯುತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ನಿನ್ನೆ ಗಲಭೆ ಆರಂಭವಾದಾಗಿನಿಂದ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯು ಹೇರಲಾಗಿದೆ. ಹಿಂಸಾಚಾರ ನಡೆದ ಸ್ಥಳದಲ್ಲಿ ಭದ್ರತಾ ಪಡೆಗಳು ರಕ್ಷಣೆಯ ಹೊಣೆ ಹೊತ್ತಿವೆ ಎಂದು ಮೂಲಗಳು ತಿಳಿಸಿವೆ.
 
ಘಟನೆಯಲ್ಲಿ ಎಂಟು ಮಂದಿ ಪೊಲೀಸರು ಸೇರಿದಂತೆ ಒಟ್ಟು 25 ಮಂದಿ ಗಾಯಗೊಂಡಿದ್ದಾರೆ, ಉದ್ರಿಕ್ತಗೊಂಡ ಜನರು ಪೊಲೀಸ್ ವಾಹನಗಳು ಮತ್ತು ಖಾಸಗಿ ವಾಹನಗಳು ಮತ್ತು ಅಂಗಡಿ ಮುಗ್ಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿವೆ. ಪ್ರತಿಭಟನಾಕಾರರು ಕಚ್ಚಾ ಬಾಂಬ್ ಕೂಡಾ ತೂರಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ