ಆರ್‌‌ಎಸ್ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣ: ಸಿಪಿಐ(ಎಮ್) ಕಾರ್ಯಕರ್ತರ ಬಂಧನ

ಗುರುವಾರ, 18 ಫೆಬ್ರವರಿ 2016 (14:05 IST)
27 ವರ್ಷದ ಆರ್‌ಎಸ್ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರು ಪೊಲೀಸರು ನಿನ್ನೆ ರಾತ್ರಿ 6 ಮಂದಿ ಸಿಪಿಐ(ಎಮ್) ಕಾರ್ಯಕರ್ತರನ್ನು ಬಂಧಿಸಿದ್ದಾರೆ. 
 
ಬಂಧಿತರನ್ನು ಸಿಜಯನ್, ಜೊಯ್ ಜೊಸೆಫ್, ಪ್ರಶಾಂತ, ಪ್ರಬೇಶ್, ಲಿಬಿನ್ ಮತ್ತು ಆಕಾಶ್ ಎಂದು ಗುರುತಿಸಲಾಗಿದ್ದು  ಎಲ್ಲರೂ ಕಣ್ಣೂರು ಜಿಲ್ಲೆಯ ನಿವಾಸಿಗಳೇ ಆಗಿದ್ದಾರೆ. 
 
ಆರ್‌ಎಸ್ಎಸ್ ಕಾರ್ಯಕರ್ತ ಸುಜಿತ್‌ ಮೇಲೆ 20 ಜನರ ಗುಂಪು ಸೋಮವಾರ ರಾತ್ರಿ ದಾಳಿ ನಡೆಸಿತ್ತು. ವೃದ್ಧ ತಂದೆ-ತಾಯಿಗಳ ಸಮ್ಮುಖದಲ್ಲಿಯೇ ಸುಜಿತ್ ಸಿಪಿಐ(ಎಮ್) ಕಾರ್ಯಕರ್ತರಿಂದ ಹೆಣವಾಗಿದ್ದ. ಘಟನೆಯಲ್ಲಿ ಆತನ ಪೋಷಕರಿಗೆ ಮತ್ತು ಸಹೋದರರಿಗೂ ಗಾಯಗಳಾಗಿದ್ದವು. 
 
ಈ ದಾಳಿಯ ಹಿಂದೆ ಸಿಪಿಐ(ಎಮ್) ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಈ ಆರೋಪವನ್ನು ನಿರಾಕರಿಸಿದ್ದ ಸಿಪಿಐ(ಎಮ್) ಪಕ್ಷದವರು ಸ್ಥಳೀಯ ಹುಡುಗಿಯನ್ನು ಚುಡಾಯಿಸಿದ್ದೇ ಈ ಘಟನೆಗೆ ಕಾರಣ ಎಂದು ವಾದಿಸಿದ್ದರು. 
 
ಘಟನೆಯ ನಂತರ ಬಿಜೆಪಿ ಮತ್ತು ಸಿಪಿಐ(ಎಮ್) ನಡುವೆ ಘರ್ಷಣೆ ಸಹ ನಡೆದಿತ್ತು. ಆರ್‌ಎಸ್ಎಸ್ ಸೇವಾಕೇಂದ್ರ ಮತ್ತು ಬಿಜೆಪಿ ಕಾರ್ಯಕರ್ತರ ಮನೆಯ ಮೇಲೆ ನಾಡಬಾಂಬ್‌ನ್ನು ಸಹ ಎಸೆಯಲಾಗಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ. 

ವೆಬ್ದುನಿಯಾವನ್ನು ಓದಿ