ಸ್ನ್ಯಾಪ್‌ಡೀಲ್ ಕಂಪನಿಯ ಉದ್ಯೋಗಿ ಅಪಹರಣ: ಸೈಕೋಪಾಥ್ ಸೇರಿ ಐವರ ಬಂಧನ

ಸೋಮವಾರ, 15 ಫೆಬ್ರವರಿ 2016 (11:01 IST)
ಸ್ನ್ಯಾಪ್‌ಡೀಲ್ ಕಂಪನಿಯ ಉದ್ಯೋಗಿ ದಿಪ್ತಿ ಸರ್ನಾ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಲ್ಲಿ ಒಬ್ಬ ಹರ್ಯಾಣಾದ ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದ ಆರೋಪಿಯೂ ಸೇರಿದ್ದು ಆತ "ಸೈಕೋಪಾಥ್ " ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಎಲ್ಲ ಐವರು ಆರೋಪಿಗಳು ಹರ್ಯಾಣಾ ಮೂಲದವರಾಗಿದ್ದು, ಈ ಕೃತ್ಯದ ಮಾಸ್ಟರ್ ಮೈಂಡ್ ಜೈಲಿನಿಂದ ಪರಾರಿಯಾಗಿದ್ದ ದೇವೇಂದ್ರ ಎಂದು ತಿಳಿದು ಬಂದಿದೆ. ಆತ ಹಲವಾರು ದಿನಗಳಿಂದ ದಿಪ್ತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಎಂದು ಹೇಳಲಾಗುತ್ತಿದೆ. 
 
24 ರ ದಿಪ್ತಿ ಕಳೆದ ವಾರ ಗುರ್ಗಾಂವನಿಂದ ಕೆಲಸ ಮುಗಿಸಿ ಮನೆಗೆ ಹಿಂತಿರುಗಲೆಂದು ಆಟೋ ಹಿಡಿದ ಬಳಿಕ ನಾಪತ್ತೆಯಾಗಿದ್ದಳು. ದೆಹಲಿ ಬಳಿ ಈ ಘಟನೆ ನಡೆದಿತ್ತು. ಆ ಆಟೋ ಚಾಲಕ ಸಹ ಅಪಹರಣಕಾರರಲ್ಲಿ ಒಬ್ಬನಾಗಿದ್ದಾನೆ ಎಂದು ತಿಳಿದು ಬಂದಿದೆ. 
 
ಘಟನೆ ನಡೆದ ಎರಡು ದಿನಗಳ ಬಳಿಕ ತನ್ನ ತಂದೆಗೆ ಕರೆ ಮಾಡಿದ್ದ ದಿಪ್ತಿ ತಾನು ಸುರಕ್ಷಿತವಾಗಿದ್ದು ಮನೆಗೆ ಹಿಂತಿರುಗುತ್ತಿರುವುದಾಗಿ ಹೇಳಿದ್ದಳು. 
 
ಆದರೆ ಮನೆಗೆ ಹಿಂತಿರುಗಿದ ಬಳಿಕ ಯುವತಿ ತನ್ನನ್ನು ಅಪಹರಿಸಿದವರು ತುಂಬ ಚೆನ್ನಾಗಿ ನೋಡಿಕೊಂಡರು. ಯಾವುದೇ ಅಪಾಯವನ್ನು ಮಾಡಲಿಲ್ಲ. ಅವರಾಗಿಯೇ ನನ್ನನ್ನು ಹೋಗೆಂದು ಬಿಟ್ಟರು. ಜತೆಗೆ ಬಸ್ ಖರ್ಚಿಗಾಗಿ 100 ರೂಪಾಯಿಗಳನ್ನು ಸಹ ನೀಡಿದ್ದರು. ಅವರು ಕೆಟ್ಟವರಲ್ಲ, ತಾನು ದೂರು ನೀಡಲಾರೆ ಎಂದು ಹೇಳಿದ್ದಾಗ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು.
 
ದಿಪ್ತಿ ಮೊಬೈಲ್ ಫೋನ್, ಲ್ಯಾಪ್‌ಟಾಪ್, ಪರ್ಸ್‌ಗಳನ್ನು ಅಪಹರಣಕಾರರು ಕಿತ್ತುಕೊಂಡಿದ್ದರು. 
 
ದಿಪ್ತಿ ನಾಪತ್ತೆ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಚಲನವನ್ನು ಉಂಟು ಮಾಡಿತ್ತು. ಸ್ನ್ಯಾಪ್‌ಡಿಲ್ #ಹೆಲ್ಪ ಫೈಂಡ್ ದಿಪ್ತಿ ಎಂಬ ಆನ್ಲೈನ್ ಅಭಿಯಾನವನ್ನು ಸಹ ಆರಂಭಿಸಿತ್ತು. 

ವೆಬ್ದುನಿಯಾವನ್ನು ಓದಿ