ಐದು ವರ್ಷದವಳಿದ್ದಾಗಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ : ಬಾಲಿವುಡ್ ನಟಿ

ಮಂಗಳವಾರ, 31 ಮಾರ್ಚ್ 2015 (17:10 IST)
"ಕೇವಲ 5 ವರ್ಷಗಳಾಗಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು", ಎಂದು ಬಾಲಿವುಡ್ ನಟಿ, ಸಲ್ಮಾನ್ ಖಾನ್ ಮಾಜಿ ಗೆಳತಿ ಸೋಮಿ ಅಲಿ ತಮ್ಮ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರೆ. 

"ನಾನು ಕೇವಲ 5 ವರ್ಷದವಳಿದ್ದಾಗ ಮನೆಗೆಲಸದವನಿಂದ ಲೈಂಗಿಕ ಶೋಷಣೆಗೊಳಗಾಗಿದ್ದೆ. ಯುಎಸ್‌ನ ಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಓದುತ್ತಿದ್ದಾಗ ನಾನಿದನ್ನು ನನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದೆ. ನನ್ನ ಖಾಸಗಿ ಅನುಭವಗಳನ್ನು ಇತರರ ಬಳಿ ಹೇಳಿಕೊಳ್ಳುವುದು ಅವರಿಗೂ ಸಹ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಪ್ರೇರೇಪಣೆ ನೀಡುತ್ತದೆ. ನಾನು ಲೈಂಗಿಕ ಶೋಷಣೆ ಪೀಡಿತೆ ಎಂದು ಹೇಳಿಕೊಳ್ಳುವುದಕ್ಕೆ ನನಗೆ ನಾಚಿಕೆಯಾಗುವುದಿಲ್ಲ", ಎಂದು ಸೋಮಿ ಹೇಳಿಕೊಂಡಿದ್ದಾರೆ. 
 
"ಪಾಕಿಸ್ತಾನದಲ್ಲಿ ನಾನು ಕೌಟುಂಬಿಕ ಹಿಂಸಾಚಾರದ ಸನ್ನಿವೇಶದಲ್ಲಿ ಬೆಳೆದೆ. ನನ್ನ ಅಮ್ಮನ ಅನೇಕ ಸ್ನೇಹಿತೆಯರು ದೈಹಿಕ ಶೋಷಣೆಗೆ ಒಳಗಾದವರಾಗಿದ್ದರು", ಎಂದು ಅವರು ತಮ್ಮ ಬಾಲ್ಯದ ಅನುಭವಗಳನ್ನು ವಿವರವಾಗಿ ಬಿಚ್ಚಿಟ್ಟಿದ್ದಾರೆ. 
 
ಆತ್ಮಕಥೆಯಲ್ಲಿ ತಮ್ಮ ಮಾಜಿ ಗೆಳೆಯ ಸಲ್ಲು ಬಗ್ಗೆ ಪ್ರಸ್ತಾಪಿಸಿರುವ ಅವರು, ಕೇವಲ ಹದಿಯಹರೆಯದ ವಯಸ್ಸಿನಲ್ಲಿ ನನ್ನ ಕನಸಿನ ಚೆಲುವ ಸಲ್ಮಾನ್‌ ಮೇಲಿನ ಕ್ರಷ್‌ನಿಂದ ನಾನು ಬಾಲಿವುಡ್‌ಗೆ ಬಂದೆ ಎಂದು ತಿಳಿಸಿದ್ದಾರೆ. ಹಿಂದಿ ಸಿನಿಮಾಗಳಲ್ಲಿ ಅದ್ಭುತ ಯಶಸ್ಸು ಸಾಧಿಸಿದ್ದ ಪಾಕಿಸ್ತಾನಿ ಚೆಲುವೆ ನಂತರ ಸುಮಾರು 8 ವರ್ಷಗಳ ಕಾಲ ಸಲ್ಲು ಜತೆ ಡೇಟಿಂಗ್ ನಡೆಸಿದ್ದಳು. ಅವರಿಬ್ಬರ ಸಂಬಂಧ 2000ನೇ ಇಸವಿಯಲ್ಲಿ ಮುರಿದು ಬಿದ್ದ ಮೇಲೆ ಆಕೆ ಗಂಟುಮೂಟೆ ಕಟ್ಟಿಕೊಂಡು ಫ್ಲೋರಿಡಾದ ತನ್ನ ನಿವಾಸಕ್ಕೆ ಮರಳಿದ್ದಳು.
 
ಆಕೆ ಸಲ್ಮಾನ್ ಪ್ರೇಯಸಿ ಎಂಬ ಅಧ್ಯಾಯ ಈಗ ಮುಚ್ಚಲ್ಪಟ್ಟಿದ್ದು ಈಗ ಆಕೆ ತನ್ನದೇ ಆದ ಸ್ವಂತ ಗುರುತಿಸುವಿಕೆಯನ್ನು ಪಡೆದಿದ್ದಾಳೆ. ನೊಂದ ಮಹಿಳೆಯರ ಕಲ್ಯಾಣಕ್ಕಾಗಿ ಆಕೆ ಸ್ಥಾಪಿಸಿರುವ ಸ್ವಯಂಸೇವಾ ಸಂಸ್ಥೆ ನೋ ಮೋರ್ ಟಿಯರ್ಸ್ (NMT), ಮಾರ್ಚ್ 27 ರಂದು ಎಂಟನೇ ವರ್ಷಕ್ಕೆ ಕಾಲಿಟ್ಟಿದೆ.  

ವೆಬ್ದುನಿಯಾವನ್ನು ಓದಿ