ಹಿಂದೂ ಧರ್ಮೀಯ, ನಿವೃತ್ತ ಮೇಜರ್ ಜನರಲ್ ಮಗನಿಗೆ ಐಸಿಸ್ ಸಂಪರ್ಕ?

ಗುರುವಾರ, 4 ಫೆಬ್ರವರಿ 2016 (11:51 IST)
ಐಸಿಸ್ ಜತೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ಸಮೀರ್ ಸರ್ದಾನಾ ಎಂಬ 44 ವರ್ಷದ ವ್ಯಕ್ತಿಯನ್ನು ಗೋವಾದಲ್ಲಿ  ಬಂಧಿಸಲಾಗಿದೆ. ಈತ ಡೆಹ್ರಾಡೂನ್ ನಿವಾಸಿಯಾಗಿದ್ದು ನಿವೃತ್ತ ಮೇಜರ್ ಜನರಲ್ ಮಗನಾಗಿದ್ದಾನೆ ಎಂದು ತಿಳಿದು ಬಂದಿದೆ.

ಮೂಲತಃ ಹಿಂದೂವಾಗಿರುವ ಈತ ಮುಸ್ಲಿಂ ಧರ್ಮವನ್ನು ಅನುಸರಿಸುತ್ತಿದ್ದ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಸದ್ಯ ಗೋವಾ ಪೊಲೀಸ್ ಭಯೋತ್ಪಾದಕ ನಿಗ್ರಹ ದಳ ಈತನನ್ನು ವಿಚಾರಣೆಗೊಳಪಡಿಸಿದೆ.
 
ವಾಸ್ಕೋ ರೈಲು ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಈತನನ್ನು ರೈಲು ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. 
ಬಂಧನದ ನಂತರ ಆತನಿಗೆ ಅಪಾಯಕಾರಿ ಭಯೋತ್ಪಾದಕ ಸಂಘಟನೆ ಐಸಿಸ್ ಜತೆ ಸಂಪರ್ಕವಿರುವ ಘೋರ ಸತ್ಯ ಬಯಲಾಗಿದೆ. 
 
ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಈತ ಅಕ್ಸೆಂಚರ್‌ನಂತಹ ಬಹುರಾಷ್ಟ್ರೀಯ ಕಂಪನಿಗಳ ಜತೆ ಸಂಪರ್ಕ ಹೊಂದಿದ್ದಾನೆ. ಜತೆಗೆ ಹಾಂಗ್‌ಕಾಂಗ್, ಮಲೇಶಿಯಾ, ಸೌಧಿ ಅರೇಬಿಯಾದಲ್ಲಿ ಕೆಲಸ ಮಾಡಿದ್ದ. ಈತನ ಬಳಿ ಇದ್ದ ಒಂದು ಲ್ಯಾಪ್‌ಟಾಪ್, 5 ಪಾಸ್ಪೋರ್ಟ್ ಮತ್ತು 4 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
 
ಆತನ ಕೆಲವು ಇ-ಮೇಲ್ ಮತ್ತು ಪತ್ರಗಳನ್ನು ಪರಿಶೀಲಿಸಲಾಗಿದೆ. ದೇಶದಲ್ಲಿ ಈ ಹಿಂದೆ ನಡೆದ ಬಾಂಬ್ ಸ್ಪೋಟಗಳ ಕುರಿತು ಆತ ಮಾಹಿತಿ ಸಂಗ್ರಹಿಸಿದ್ದಾನೆ ಎಂಬ ಮಾಹಿತಿಗಳು ಲಭಿಸಿವೆ. 
 
ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41 (ಸಿಆರ್‌ಪಿಸಿ) ಅಡಿಯಲ್ಲಿ ಆತನನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ