ಆಸ್ಪತ್ರೆಗೆ ದಾಖಲಾದ ಸೋನಿಯಾ ಗಾಂಧಿ

ಶುಕ್ರವಾರ, 19 ಡಿಸೆಂಬರ್ 2014 (12:16 IST)
ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಗುರುವಾರ ದಿಲ್ಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಅವರು ಇದನ್ನು ಖಚಿತ ಪಡಿಸಿದ್ದಾರೆ.

 
ಹೃದಯರೋಗ ತಜ್ಞ ಅರುಪ್ ಕುಮಾರ್ ಬಸು ಅವರು ಸೋನಿಯಾ ಗಾಂಧಿಯವರ ಚಿಕಿತ್ಸೆಯ ಮೇಲ್ವಿಚಾರಣೆ ವಹಿಸಿದ್ದಾರೆ. ಇದು ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
 
2011ರಲ್ಲಿ ಅಮೇರಿಕಾದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಗಾಂಧಿ ಆರೋಗ್ಯದ ಬಗ್ಗೆ ತೀವ್ರತರವಾದ ಊಹಾಪೋಹಗಳು ಹುಟ್ಟಿಕೊಂಡಿದ್ದವು. ನ್ಯೂಯಾರ್ಕ್‌ನ ಸ್ಲೋನ್ ಕೆಟ್ಟೆರಿಂಗ್ ಕ್ಯಾನ್ಸರ್ ಕೇಂದ್ರದಲ್ಲಿ ಅವರು ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು . 
 
ಮಾಧ್ಯಮಗಳ ವರದಿಯ ಪ್ರಕಾರ 2008ರಲ್ಲಿ ಸೋನಿಯಾ ಅವರು ಸಾಮಾನ್ಯ ಸ್ವರೂಪದ ಆಸ್ತಮಾ ಸಮಸ್ಯೆಗೆ ಆರು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. 
 
2013 ಫೆಬ್ರವರಿಯಲ್ಲಿ ತ್ರಿಪುರಾದಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅನಾರೋಗ್ಯದ ಕಾರಣಕ್ಕೆ ಸೋನಿಯಾ ನಿಗದಿ ಪಡಿಸಿದ್ದ ಚುನಾವಣಾ ಪ್ರಚಾರ ಸಭೆಗಳಿಗೆ ಹಾಜರಾಗಿರಲಿಲ್ಲ. 
 
ಕಳೆದ ಎಪ್ರೀಲ್ ತಿಂಗಳಲ್ಲಿ  ಸಾರ್ವತ್ರಿಕ ಚುನಾವಣೆ ಪ್ರಚಾರ ಸಂದರ್ಭದಲ್ಲು ಕೂಡ ಅನಾರೋಗ್ಯದ ಕಾರಣದಿಂದ ಕೆಲ ಪ್ರಚಾರ ಸಭೆಗಳಿಗೆ ಅವರು ಗೈರು ಹಾಜರಾಗಿದ್ದರು.

ವೆಬ್ದುನಿಯಾವನ್ನು ಓದಿ