ದುಬಾರಿ ವಾಚ್ ವಿವಾದ: ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಬಿಸಿ

ಭಾನುವಾರ, 28 ಫೆಬ್ರವರಿ 2016 (18:25 IST)
ದುಬಾರಿ ವಾಚ್ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಉತ್ತರ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಯವರಿಗೆ ತೃಪ್ತಿ ತಂದಿಲ್ಲವಾದ್ದರಿಂದ, ರಾಜ್ಯದ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ವಾಚ್ ವಿವಾದ ಕುರಿತಂತೆ ಸಂಪೂರ್ಣ ವರದಿ ನೀಡಿ ಎಂದು ಹೈಕಮಾಂಡ್ ಆದೇಶಿಸಿದೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾಗ ಸೋನಿಯಾ ಅವರನ್ನು ಭೇಟಿ ಮಾಡಿ, ವಾಚ್ ವಿಷಯ ಒಂದು ಸಮಸ್ಯೆಯೇ ಅಲ್ಲ. ನಾನು ಧರಿಸಿದ್ದ ದುಬಾರಿ ವಾಚ್ ನಾನು ಖರೀದಿಸಿದ್ದಲ್ಲ. ಗೆಳೆಯರೊಬ್ಬರು ಉಡುಗೊರೆಯಾಗಿ ಕೊಟ್ಟಿದ್ದರು ಎಂದು ಮಾಹಿತಿ ನೀಡಿದ್ದರು. 
 
ಸಿಎಂ ವಾಚ್ ಪ್ರಕರಣದ ಬಗ್ಗೆ ವರದಿ ಕೇಳಿದ ಹೈಕಮಾಂಡ್, ಸಿಎಂ ಸ್ಪಷ್ಟೀಕರಣ ತೃಪ್ತಿ ತಂದಿಲ್ಲವಾದ್ದರಿಂದ ಕೂಡಲೇ ವರದಿ ನೀಡುವಂತೆ ದಿಗ್ವಿಜಯ್ ಸಿಂಗ್‌ಗೆ ಆದೇಶ ನೀಡಲಾಗಿದೆ.
  
ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಸೂಟ್ ಬೂಟ್ ಸರಕಾರವೆಂದು ಟೀಕಿಸುತ್ತಾರೆ.ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ದುಬಾರಿ ವಾಚ್ ಕಟ್ಟಿಕೊಂಡಿರುವುದು ಮುಜುಗರ ತಂದಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಆಸಮಾಧಾನ ವ್ಯಕ್ತಪಡಿಸಿದೆ.
 
ಹೆಬ್ಬಾಳ ಉಪಚುನಾವಣೆ ಫಲಿತಾಂಶ ಮತ್ತು ಜಿಪಂ ಹಾಗೂ ತಾಪಂ ಚುನಾವಣೆ ಫಲಿತಾಂಶ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೆಲ ಹಿರಿಯ ಕಾಂಗ್ರೆಸ್ ಮುಖಂಡರು ಸೋನಿಯಾ ಗಾಂಧಿಗೆ ದೂರು ನೀಡಿದ್ದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ