ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳೊಂದಿಗೆ ಮೈತ್ರಿ: ಇಂದು ಕಾಂಗ್ರೆಸ್ ಸಭೆ

ಸೋಮವಾರ, 1 ಫೆಬ್ರವರಿ 2016 (17:11 IST)
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತಂತೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಮುಖಂಡರ ಸಭೆ ನಡೆಯಲಿದೆ.
 
ಪಶ್ಚಿಮ ಬಂಗಾಳದ ರಾಜ್ಯ ಕಾಂಗ್ರೆಸ್ ಘಟಕ ಎಡಪಕ್ಷಗಳೊಂದಿಗೆ ಮೈತ್ರಿಗೆ ಸಮ್ಮತಿಸಿದ ಹಿನ್ನೆಲೆಯಲ್ಲಿ, ಸೋನಿಯಾ ಗಾಂಧಿ ಎಡಪಕ್ಷಗಳೊಂದಿಗೆ  ಮೈತ್ರಿ ಕುರಿತಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಏತನ್ಮಧ್ಯೆ, ಕೇರಳದಲ್ಲಿ ಎಡಪಕ್ಷಗಳು ಕಾಂಗ್ರೆಸ್ ಪಕ್ಷದ ವಿರುದ್ಧವೇ ಹೋರಾಟ ನಡೆಸುತ್ತಿರುವುದರಿಂದ ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತಂತೆ ಕೆಲ ನಾಯಕರು ಅಪಸ್ವರ ಎತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಉಸ್ತುವಾರಿ ಹೊತ್ತಿರುವ ಮುಖಂಡರು ಹೈಕಮಾಂಡ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. 
 
ಇಂದಿನ ಸಭೆಯಲ್ಲಿ ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖಂಡರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ, ನಂತರ ರಾಹುಲ್, ಸೋನಿಯಾ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ