ಸೋನಿಯಾ ಮೈ ಬಣ್ಣವೇ ಅವರನ್ನು ಕಾಂಗ್ರೆಸ್ ಅಧ್ಯಕ್ಷೆ ಗಾದಿಗೇರಿಸಿದೆ: ಗಿರಿರಾಜ್ ಸಿಂಗ್

ಬುಧವಾರ, 1 ಏಪ್ರಿಲ್ 2015 (17:54 IST)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾರವರ ವಿರುದ್ಧ ವರ್ಣಭೇದತೆಯನ್ನು ಸೂಚಿಸುವ ಅವಮಾನಕರ ಹೇಳಿಕೆಯನ್ನು ನೀಡಿರುವ  ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಚರ್ಮದ ಬಣ್ಣವೇ ಅವರನ್ನು ಪಕ್ಷದ ಉನ್ನತ ಪದವಿಗೇರಿಸಿದೆ ಎಂದು ಹೇಳಿದ್ದಾರೆ. 

ಒಂದು ವೇಳೆ ರಾಜೀವ್ ಗಾಂಧಿ ನೈಜಿರಿಯನ್ ಯುವತಿಯನ್ನು ಮದುವೆಯಾದರೆ ಮತ್ತು ಆಕೆ ಬಿಳಿ ಚರ್ಮದವಳಾಗಿರದಿದ್ದರೆ ಆಕೆಯನ್ನು ಕಾಂಗ್ರೆಸ್ ತಮ್ಮ ನಾಯಕಿಯನ್ನಾಗಿ ಒಪ್ಪಿಕೊಳ್ಳುತ್ತದೆಯೇ? ಎಂದು ಸಿಂಗ್ ಪ್ರಶ್ನಿಸಿದ್ದಾರೆ. 
 
ಬಿಜೆಪಿ ನಾಯಕನ ಈ ಹೇಳಿಕೆಯನ್ನು ತೀವೃವಾಗಿ ಖಂಡಿಸಿರುವ ಕಾಂಗ್ರೆಸ್, ಇದು ಬಿಜೆಪಿಯವರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. 
 
ಸಿಂಗ್ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಬಿಜೆಪಿ 2014ರ ಚುನಾವಣೆ ಗೆದ್ದ ಬಳಿಕ ಅವರು ಮೋದಿಯನ್ನು ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದ್ದರು. 
 
ಕಡು ಬಿಸಿಲಲ್ಲಿ ಕುಳಿತು ಉಪವಾಸ ಧರಣಿ ನಡೆಸಬೇಡಿ.  ಇದರಿಂದ ನಿಮ್ಮ ಮೈ ಬಣ್ಣ ಕಪ್ಪಾಗುತ್ತದೆ ಮತ್ತು ನಿಮ್ಮ ವೈವಾಹಿಕ ಜೀವನಕ್ಕೆ ಸಮಸ್ಯೆಯುಂಟಾಗುತ್ತದೆ ಎಂದು ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಪ್ರತಿಭಟನಾ ನಿರತ ದಾದಿಗಳಿಗೆ
ಸಲಹೆ ನೀಡಿದ ಬೆನ್ನ ಹಿಂದೆ ಸಿಂಗ್ ಸಹ ಅದೇ ಮಾದರಿಯಲ್ಲಿ ಹೇಳಿಕೆ ನೀಡಿದ್ದಾರೆ. 
 
ತದನಂತರ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ