ದೇಶವಾಸಿಗಳಿಗೆ ನಕಲಿ ಕನಸುಗಳನ್ನು ಮಾರಿದ ಮೋದಿ: ಸೋನಿಯಾ ಕಿಡಿ

ಬುಧವಾರ, 20 ಆಗಸ್ಟ್ 2014 (13:32 IST)
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೇಲೆ ಹರಿಹಾಯ್ದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಡಿಎ ಸರಕಾರ ಭಾರತೀಯ ನಾಗರಿಕರಿಗೆ ನಕಲಿ ಕನಸುಗಳನ್ನು ಮಾರಿದೆ ಎಂದು ಆರೋಪಿಸಿದ್ದಾರೆ. 

ತಮ್ಮ ಪತಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 70ನೇ ಜನ್ಮದಿನದ ಹಿನ್ನೆಲೆಯಲ್ಲಿ  ಪಕ್ಷದ ಸಂಕಲ್ಪ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ರಾಜೀವ್ ಗಾಂಧಿಯವರ ಆದರ್ಶಗಳು ಮತ್ತು ಕನಸುಗಳು ಸದಾ ನಮ್ಮ ಜತೆ ಇರುತ್ತವೆ ಎಂದು ಹೇಳಿದರು. 
 
ಮಹಿಳಾ ಹಕ್ಕುಗಳ ಬಗ್ಗೆ  ಪ್ರಸ್ತಾಪಿಸಿದ ಅವರು ದೇಶದ ಅರ್ಧ ಜನಸಂಖ್ಯೆಯನ್ನು ಕಡೆಗಣಿಸುವುದರ ಮೂಲಕ ದೇಶ ವಿಕಾಶಗೊಳ್ಳದು. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ 33% ಮೀಸಲಾತಿ ನೀಡಬೇಕಾದ ಅಗತ್ಯವನ್ನು ರಾಜೀವ್ ಒತ್ತಿ ಹೇಳುತ್ತಿದ್ದರು ಎಂದರು. 
 
ಕಾಂಗ್ರೆಸ್  ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪಾಸ್ ಮಾಡಿತು. ಆದರೆ ಕೆಲ ಕಾರಣದಿಂದ ಲೋಕಸಭೆಯಲ್ಲಿ ಇದನ್ನು ಜಾರಿಗೊಳಿಸಲಾಗಲಿಲ್ಲ. ಈ ವಿಷಯದಲ್ಲಿ ತಮ್ಮ ಪಕ್ಷ ಬದ್ಧವಾಗಿದ್ದು, ಪ್ರಸ್ತುತ ವಿರೋಧ ಪಕ್ಷವಾಗಿರುವ ಕಾಂಗ್ರೆಸ್, ಎನ್‌ಡಿಎ  ಸರಕಾರಕ್ಕೆ ಮಸೂದೆಯನ್ನು ಅಂಗೀಕಾರ ಮಾಡುವಂತೆ ಒತ್ತಡ ಹೇರಲಿದೆ ಎಂದು ಸೋನಿಯಾ ಹೇಳಿದರು . 
 
ತಮ್ಮಪಕ್ಷ  ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಎಂದಿಗೂ ತಮ್ಮ ಆದರ್ಶಗಳನ್ನು ಬಿಟ್ಟುಕೊಟ್ಟಿಲ್ಲ.  ಗೆಲುವು ಮತ್ತು ಸೋಲು ಜೀವನದ ಭಾಗಗಳು. ಪ್ರಮುಖ ವಿಷಯ ಏನೆಂದರೆ ನಮ್ಮ ಪಕ್ಷ ಸಿದ್ಧಾಂತಕ್ಕೆ ಅಂಟಿಕೊಂಡು ಬಂದಿದೆ ಎಂದು ಅವರು ಒತ್ತಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ