ಸಂಸತ್ತಿನಲ್ಲಿ ಕಲಾಪಕ್ಕೆ ಅಡ್ಡಿ; ಸೋನಿಯಾರವರೇ ಜವಾಬ್ದಾರರು: ಬಿಜೆಪಿ

ಸೋಮವಾರ, 3 ಆಗಸ್ಟ್ 2015 (17:36 IST)
ಸಂಸತ್ತಿನಲ್ಲಿ ಕಾಂಗ್ರೆಸ್ ಕೋಲಾಹಲ ಮುಂದುವರೆಸಿರುವುದಕ್ಕೆ ಕ್ರೋಧಗೊಂಡಿರುವ ಬಿಜೆಪಿ, ಮುಂಗಾರು ಅಧಿವೇಶನಕ್ಕೆ  ಉಂಟಾಗುತ್ತಿರುವ ಅಡೆತಡೆಗಳಿಗೆ ಸೋನಿಯಾ ಗಾಂಧಿಯವರೇ ಹೊಣೆಗಾರರಾಗುತ್ತಾರೆ ಎಂದು ಹೇಳಿದೆ. ಜತೆಗೆ ಸೋನಿಯಾ ನೇತೃತ್ವದ ಪಕ್ಷ "ಗೊಂದಲ ಮತ್ತು ಆತಂಕ" ದಿಂದಾಗಿ ಈ ರೀತಿಯ ವರ್ತನೆಯನ್ನು ತೋರುತ್ತಿದೆ ಎಂದು ಅಣಕವಾಡಿದೆ. 

 
ಬಿಜೆಪಿಯ ಮುಖ್ಯ ಕಾರ್ಯಾಲಯದಲ್ಲಿ ವರದಿಗಾರರರೊಂದಿಗೆ ಮಾತನಾಡುತ್ತಿದ್ದ ಬಿಜೆಪಿ ನಾಯಕಿ, ಕೇಂದ್ರ ಸಚಿವೆ ನಿರ್ಮಲಾ "ಸೀತಾರಾಮನ್, ಕಾಂಗ್ರೆಸ್ ಸದಸ್ಯರು ಭಿತ್ತಿ ಪತ್ರ, ಪೋಸ್ಟರ್‌ಗಳನ್ನು ಹಿಡಿದುಕೊಂಡು ಸ್ಪೀಕರ್ ಎದುರು ಗಲಾಟೆ ನಡೆಸುತ್ತಿದ್ದಾರೆ. ಇವೆಲ್ಲವೂ ಸೋನಿಯಾ ಸಲಹೆಯಂತೆ ನಡೆಯುತ್ತಿದೆ. ಮುಂಗಾರು ಅಧಿವೇಶನ ವಿಫಲತೆಯನ್ನು ಕಂಡರೆ ಅದಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ನೇರ ಹೊಣೆಗಾರರಾಗಿರುತ್ತಾರೆ", ಎಂದು ಹೇಳಿದ್ದಾರೆ. 
 
2010 ರ ಚಳಿಗಾಲದ ಅಧಿವೇಶನವೂ ಜೆಪಿಸಿ ಮತ್ತು 2 ಜಿ ಹಗರಣಗಳಿಂದಾಗಿ ವಾಷ್ ಔಟ್ ಆಗಿತ್ತು.  
 
"ಆದರೆ ಆಗ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿತ್ತು. ಆದರೆ ಲಲಿತ್ ಮೋದಿ ಪ್ರಕರಣದಲ್ಲಿ ನಮ್ಮ ಪಕ್ಷದ ಸಚಿವರಿಂದ ಯಾವುದೇ ರೀತಿಯ  ಕಾನೂನು ಉಲ್ಲಂಘನೆ ಆಗಿಲ್ಲ," ಎಂದು ಅವರು ಹೇಳಿದ್ದಾರೆ.
 
"ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಚರ್ಚೆಗೆ ಬರಬೇಕು ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಅವರು ಚರ್ಚೆಗೆ ಬಂದರೆ ಕೆಲವು ಕಠಿಣ ವಾಸ್ತವಗಳನ್ನು ಹೊರತೆಗೆಯುತ್ತಾರೆ ಎಂದು ಕಾಂಗ್ರೆಸ್ ಚರ್ಚೆ ನಡೆಸಲು ಭಯ ಪಡುತ್ತದೆ. ಆದ್ದರಿಂದ ವೃಥಾ ಕೋಲಾಹಲವನ್ನು ನಡೆಸುತ್ತಿದೆ, " ಎಂದು ಸೀತಾರಾಮನ್ ಆರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ