ವಿಭಜನೆ ಬಿಜೆಪಿಗೆ ಸಹಾಯಕವಾಯಿತು, ಆದರೆ ಸೇನೆಯ ಜತೆ ಮೈತ್ರಿ ಕಡಿತವಿಲ್ಲ: ಫಡ್ನವಿಸ್

ಸೋಮವಾರ, 25 ಮೇ 2015 (16:53 IST)
'ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಿವಸೇನೆಯ ಜತೆ ಮೈತ್ರಿ ಕಡಿದುಕೊಂಡಿದ್ದು ಬಿಜೆಪಿಗೆ ಸಹಾಯಕವಾಯಿತು. ಆದರೆ ಕೇಸರಿ ಪಕ್ಷಗಳ ಮೈತ್ರಿ ಮುರಿದಿದೆ ಎಂಬುದು ಇದರ ಅರ್ಥವಲ್ಲ', ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. 

ರಾಜ್ಯದಲ್ಲಿ ಅಧಿಕಾರಕ್ಕೇರಿದ ಬಳಿಕ ಪ್ರಥಮ ಬಾರಿ ಪಕ್ಷದ ಸಮಾವೇಶವನ್ನು ನಡೆಸಿದ ಬಳಿಕ ವರದಿಗಾರರ ಬಳಿ ಮಾತನಾಡುತ್ತಿದ್ದ ಅವರು, ಭವಿಷ್ಯದಲ್ಲಿ ತಮ್ಮ ಮೈತ್ರಿ ಯಾವ ದಿಕ್ಕಿನತ್ತ ಸಾಗಲಿದೆ ಎಂಬುದರ ಕುರಿತು ಸ್ಪಷ್ಟಪಡಿಸಿದರು. 
 
"ನಾವು ನಮ್ಮ ಮಿತ್ರ ಪಕ್ಷದೊಂದಿಗೆ ಭವಿಷ್ಯದಲ್ಲಿ ಸಹ ಚುನಾವಣೆಯನ್ನೆದುರಿಸಲಿದ್ದೇವೆ. ವಿಧಾನಸಭೆ ಚುನಾವಣೆ ಪೂರ್ವ  ಮೈತ್ರಿ ಕಡಿದುಕೊಂಡಿದ್ದು ನಮ್ಮ ಗೆಲುವಿಗೆ ನೆರವಾಯಿತು. ಆದರೆ ನಮ್ಮ ಗೆಳೆತನ ಕಡಿತಗೊಳ್ಳಲಿದೆ", ಎಂಬುದು ಇದರ ಅರ್ಥವಲ್ಲ  ಎಂದು ಫಡ್ನವಿಸ್ ಹೇಳಿದ್ದಾರೆ. 
 
ಮುಂದಿನ ಎರಡು ವರ್ಷಗಳಲ್ಲಿ  ನಿರ್ಣಾಯಕ ಸಿವಿಕ್ ಕಾರ್ಪೋರೇಷನ್ ಚುನಾವಣೆ ನಡೆಯಲಿದೆ. ವಿಶೇಷವಾಗಿ ಬಿಎಂಸಿ ಚುನಾವಣೆ ನಡೆಯಲಿದ್ದು ಎರಡು ದಶಕಗಳಿಂದ ಅದು ಶಿವಸೇನೆ ನಿಯಂತ್ರಣದಲ್ಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಮೈತ್ರಿ ಗಟ್ಟಿಯಾಗಿದೆ ಎಂದು ಫಡ್ನವಿಸ್ ಸೂಚ್ಯವಾಗಿ ಹೇಳಿದ್ದಾರೆ. 
 
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಶಿವಸೇನೆ ಅದರ ಮೈತ್ರಿಕೂಟದಲ್ಲಿತ್ತು. ಆದರೆ ಮಹಾರಾಷ್ಟ್ರ ವಿಧಾನಸಭೆ ವೇಳೆ ಸೀಟು ಹಂಚಿಕೆಯಲ್ಲಾದ ಭಿನ್ನಾಭಿಪ್ರಾಯಗಳಿಂದಾಗಿ ಅದು ಬಿಜೆಪಿಯ ಜತೆಗೆ ಸಂಬಂಧ ಕಡಿದುಕೊಂಡಿತ್ತು. ಚುನಾವಣೆ ನಂತರ ಅದು ಮತ್ತೆ ಬಿಜೆಪಿಯ ಜತೆ ಕೈ ಜೋಡಿಸಿತು. ಆದರೆ ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಕೂಡ ಅದು ತನ್ನ ಮಿತ್ರ ಪಕ್ಷದ ಕೆಲವು ಯೋಜನೆಗಳ ವಿರುದ್ಧ ಕಟು ಟೀಕೆಯನ್ನು ನಿಲ್ಲಿಸಿಲ್ಲ.  ಭೂ ಸ್ವಾಧೀನ ಮಸೂದೆ, ಜೈಟಾಪುರ್ ನೂಕ್ಲಿಯರ್ ಪ್ಲಾಂಟ್ ಮತ್ತು ರೈತರ ಆತ್ಮಹತ್ಯೆ ಕುರಿತಂತೆ ಅದು ಬಿಜೆಪಿ ಸರಕಾರಕ್ಕೆ ಅವ್ಯಾಹತವಾಗಿ ಚಾಟಿಯೇಟು ಬೀಸುತ್ತಿದೆ. 

ವೆಬ್ದುನಿಯಾವನ್ನು ಓದಿ