ಪ್ರಮೋದ್ ಮುತಾಲಿಕ್ ಗೋವಾ ಪ್ರವೇಶ ನಿಷೇಧ: ಸರ್ಕಾರದ ಕ್ರಮ ಎತ್ತಿ ಹಿಡಿದ ಸುಪ್ರೀಂಕೋರ್ಟ್

ಸೋಮವಾರ, 31 ಆಗಸ್ಟ್ 2015 (13:17 IST)
ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೆ ಸರ್ಕಾರ ಹೇರಿದ್ದ ಗೋವಾ ಪ್ರವೇಶ ನಿಷೇಧವನ್ನು ಸುಪ್ರೀಂಕೋರ್ಟ್ ಇಂದು ಎತ್ತಿ ಹಿಡಿದಿದೆ. 

2009 ರಲ್ಲಿ ಮಂಗಳೂರಿನ ಪಬ್ ಒಂದರಲ್ಲಿ ಪಾರ್ಟಿ ಮಾಡುತ್ತಿದ್ದ ಯುವಕ ಯುವತಿಯರ ಮೇಲೆ ದಾಳಿ ನಡೆಸಿದ್ದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಗೋವಾದಲ್ಲಿ ಹಿಂದೂತ್ವವಾದಿ ಸಂಘಟನೆಗಳ ಶಾಖೆಯನ್ನು ಆರಂಭಿಸಲು ಗೋವಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎನ್ನುವ ವರದಿಗಳ ಹಿನ್ನಲೆಯಲ್ಲಿ ಗೋವಾ ಸರಕಾರ ಮುತಾಲಿಕ್ ಪ್ರವೇಶಕ್ಕೆ ನಿಷೇಧ ಹೇರಿತ್ತು.
 
ಗೋವಾ ಪ್ರವೇಶಕ್ಕೆ ನಿಷೇಧ ಹೇರಿರುವ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ, ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೋರ್ಟ್ ಮೊರೆ ಹೋಗಿದ್ದರು.
 
ಈ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿತ್ತು. ಮುತಾಲಿಕ್ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. 
 
ಆದರೆ ಹೈಕೋರ್ಟ್ ತೀರ್ಪನ್ನು ಸಮರ್ಥಿಸಿಕೊಂಡಿರುವ ಸುಪ್ರೀಂಕೋರ್ಟ್, 'ನೀವು ಮಂಗಳೂರಿನಲ್ಲಿ ಮಾಡಿದ್ದೇನು? ಯುವತಿಯರನ್ನು ಥಳಿಸುವ ಮೂಲಕ ನೈತಿಕ ಪೊಲೀಸ್‌ಗಿರಿಯನ್ನು ತೋರಿಸಿದಿರಾ? ನಿಮ್ಮ ನಿಷೇಧವನ್ನು ಸಮರ್ಥಿಸಿಕೊಳ್ಳುವ ಮೂಲಕ ಹೈಕೋರ್ಟ್ ಉಚಿತ ತೀರ್ಪನ್ನೇ ನೀಡಿದೆ', ಎಂದು ಮುತಾಲಿಕ್‌ಗೆ ಛೀಮಾರಿ ಹಾಕಿದ್ದು, ಅವರಿಗೆ 6 ತಿಂಗಳ ಮಟ್ಟಿಗೆ ಗೋವಾ ಪ್ರವೇಶಿಸಲು ಅವಕಾಶ ನೀಡುವುದು ಬೇಡ ಎಂದಿದೆ. 

ವೆಬ್ದುನಿಯಾವನ್ನು ಓದಿ