ಐವರು ಭಾರತೀಯರಿಗೆ ಗಲ್ಲುಶಿಕ್ಷೆ ವಿಧಿಸಿದ ಶ್ರೀಲಂಕಾ ಕೋರ್ಟ್

ಗುರುವಾರ, 30 ಅಕ್ಟೋಬರ್ 2014 (17:58 IST)
ಐವರು ಭಾರತೀಯ ಮೀನುಗಾರರಿಗೆ ಗಲ್ಲುಶಿಕ್ಷೆ ವಿಧಿಸಿ ಶ್ರೀಲಂಕಾ ಕೋರ್ಟ್ ತೀರ್ಪು ನೀಡಿದೆ. 2011ರಲ್ಲಿ ಈ ಮೀನುಗಾರರನ್ನು ಮಾದಕವಸ್ತುಗಳ ಸಾಗಾಟದ ಆರೋಪದ ಮೇಲೆ   ಬಂಧಿಸಲಾಗಿತ್ತು. ತೀರ್ಪು ಪ್ರಶ್ನಿಸಿ ನವೆಂಬರ್ 14ರಂದು ಶ್ರೀಲಂಕಾ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
 
ಮೀನುಗಾರರ ಜೊತೆ ಮೂವರು ಶ್ರೀಲಂಕನ್ನರಿಗೆ ಕೂಡ ಮರಣದಂಡನೆ ನೀಡಲಾಗಿದೆ ಎಂದು ಡೇಲಿ ಮಿರರ್ ವರದಿಮಾಡಿದೆ. ಭಾರತದಿಂದ ಶ್ರೀಲಂಕಾಗೆ ಹೆರಾಯಿನ್ ಮಾದಕವಸ್ತು ಸಾಗಿಸುತ್ತಿದ್ದ ಆರೋಪದ ಮೇಲೆ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ತಪ್ಪಿತಸ್ಥರೆಂದು ಕಂಡುಬಂದಿತ್ತು. 
 
ಆರೋಪಿಗಳ ಪರ ವಕೀಲರು ಶಿಕ್ಷೆಯ ವಿರುದ್ಧ ಶ್ರೀಲಂಕಾ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನವೆಂಬರ್ 15ರವರೆಗೆ ಅವಕಾಶವಿದೆ.ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ಭಾರತ ಕಾನೂನಿಗೆ ಬದ್ಧವಾದ ರೀತಿಯಲ್ಲಿ ಪ್ರಕರಣವನ್ನು ನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. ಇದೊಂದು ಮಾನವೀಯ ನೆಲೆಯ ವಿಷಯವಾಗಿದ್ದು, ಈ ಮೀನುಗಾರರು ತಪ್ಪಿತಸ್ಥರಲ್ಲವೆನ್ನುವುದು ನಮ್ಮ ಭಾವನೆಯಾಗಿದೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ