ಜಯಾ ಸಾವಿನ ತನಿಖೆಗೆ ಆಗ್ರಹಿಸಿದ ಮಲಸಹೋದರ

ಶನಿವಾರ, 17 ಡಿಸೆಂಬರ್ 2016 (11:55 IST)
ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅವರ ಮಲಸಹೋದರ ವಾಸುದೇವನ್ ಮತ್ತು ಸಹೋದರಿ ಶೈಲಜಾ ಪುತ್ರಿ ಅಮೃತಾ ಒತ್ತಾಯಿಸಿದ್ದಾರೆ. 

ನಗರದ ಯಾಜ್ಞವಲ್ಕ್ಯ ಮಂಟಪದಲ್ಲಿ ಜಯಾ ಅವರ ತಿಥಿಕಾರ್ಯ ನಡೆಸಿ ಮಾತನಾಡುತ್ತಿದ್ದ ವಾಸುದೇವನ್, ತಮ್ಮ ತಂಗಿಯ ಸಾವಿನ ಬಗ್ಗೆ ಹಲವಾರು ಅನುಮಾನಗಳು ಎದ್ದಿವೆ. ಹೀಗಾಗಿ ಅವರ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದರು.
 
ಜಯಾ ಅವರಿಗೆ ಸೇರಿದ ಆಸ್ತಿಯನ್ನು ಅಕ್ರಮ ಸ್ವಾಧೀನದಿಂದ ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. 
 
ಈ ಕುರಿತಂತೆ ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ಜಯಾ ಸಾವಿನಲ್ಲಿ ಅವರ ಗೆಳತಿ ಶಶಿಕಲಾ ಕೈವಾಡವಿದೆ ಎಂಬ ಅನುಮಾನವಿದೆ. ಜಯಾ ಬರೆದಿರುವ ವಿಲ್ ಬಹಿರಂಗ ಪಡಿಸಬೇಕು ಎಂದು ವಾಸುದೇವನ್ ಆಗ್ರಹಿಸಿದ್ದಾರೆ.
 
ಕಳೆದ ಮಂಗಳವಾರ ವೈಷ್ಣವ ಸಂಪ್ರದಾಯದಂತೆ ಜಯಾ ಅವರ ಮರು ಅಂತ್ಯಸಂಸ್ಕಾರ ನಡೆಸಿದ್ದ ವಾಸುದೇವನ್ ಇಂದು ಸಹೋದರಿಯ ವೈಕುಂಠ ಸಮಾರಾಧನೆಯನ್ನು ಮಾಡಿಸುತ್ತಿದ್ದಾರೆ. 
 
ಹೃದಯಾಘಾತಕ್ಕೊಳಗಾಗಿ ಮರಣವನ್ನಪ್ಪಿದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಬ್ರಾಹ್ಮಣ ಸಂಪ್ರದಾಯದಂತೆ ಸಂಸ್ಕಾರ ಮಾಡಿರಲಿಲ್ಲ. ಹೀಗಾಗಿ ವಾಸುದೇವನ್ ಅವರು ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಮತ್ತೊಮ್ಮೆ ಅಂತ್ಯ ಸಂಸ್ಕಾರವನ್ನು ಮಾಡಿಸಿದ್ದರು. 
 
ಜಯಾ ದೇಹವನ್ನು ಸುಡಲಿಲ್ಲವಾದ್ದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಹೀಗಾಗಿ ದರ್ಭೆಯಲ್ಲಿ ಜಯಾ ಪ್ರತಿಕೃತಿಯನ್ನು ನಿರ್ಮಿಸಿ ಅದಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು ಎಂದು ಅವರ ಸಂಬಂಧಿಕರು ತಿಳಿಸಿದ್ದರು.
 

ವೆಬ್ದುನಿಯಾವನ್ನು ಓದಿ