ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶಗಳ ಭ್ರಷ್ಟಾಚಾರಕ್ಕೆ ಗಾಂಧಿ ಕುಟುಂಬ ಹೊಣೆಯೇ: ಮೋದಿಗೆ ಶಿವಸೇನೆ

ಬುಧವಾರ, 8 ಜೂನ್ 2016 (15:50 IST)
ಪ್ರಧಾನಮಂತ್ರಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿಯೂ ಭ್ರಷ್ಟಾಚಾರ ನಿರಂತರವಾಗಿ ನಡೆಯುತ್ತಿದೆ. ಬಿಜೆಪಿ ಸರಕಾರಗಳಿರುವ ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಭ್ರಷ್ಟಾಚಾರದ ಪ್ರಕರಣಗಳು ನಡೆದಿಲ್ಲವೇ? ಅಲ್ಲಿನ ಭ್ರಷ್ಟಾಚಾರಗಳಿಗೂ ಗಾಂಧಿ ಕುಟುಂಬ ಹೊಣೆಯೇ ಎಂದು ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.
 
ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ವಿದೇಶಿ ಪ್ರವಾಸಗಳಲ್ಲಿ ಹೇಳಿಕೆ ನೀಡುತ್ತಿರುವ ಪ್ರಧಾನಿ ಮೋದಿ, ವಿದೇಶಗಳಲ್ಲಿ ಭಾರತವನ್ನು ತೆಗಳುವುದನ್ನು ನಿಲ್ಲಿಸಲಿ ಎಂದು ಶಿವಸೇನೆ ವಾಗ್ದಾಳಿ ನಡೆಸಿದೆ.
 
ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ತೆರಳಿದಾಗಲೆಲ್ಲಾ ಭಾರತದ ವ್ಯವಸ್ಥೆ ಭ್ರಷ್ಟತೆಯಿಂದ ಕೂಡಿದೆ ಎಂದು ನಿರಂತರವಾಗಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಇಂತಹ ಹೇಳಿಕೆಗಳಿಗಾಗಿ ದೀರ್ಘಾವಧಿಯಲ್ಲಿ ಭಾರೆ ಬೆಲೆ ತೆರಬೇಕಾಗುತ್ತದೆ ಎಂದು ಕಿಡಿಕಾರಿದೆ. 
 
ಪ್ರಧಾನಿ ಮೋದಿ ದೋಹಾದಲ್ಲಿ ಸಾರ್ವಜನಿಕವಾಗಿ ಮಾತನಾಡಿ, ಭಾರತ ದೇಶ ಭ್ರಷ್ಟಾಚಾರದ ಹಾಸಿಗೆ ಹೊದ್ದು ಮಲಗಿತ್ತು. ನಾನು ತೆಗೆದುಕೊಂಡ ಕೆಲ ಕಠಿಣ ಕ್ರಮಗಳಿಂದಾಗಿ ಭ್ರಷ್ಟಾಚಾರ ನಿಧಾನವಾಗಿ ನಿರ್ಮೂಲನೆಯಾಗುತ್ತಿದೆ. ಇಂತಹ ಹೇಳಿಕೆ ನೀಡಿ ಭಾರತ ದೇಶವನ್ನು ಅಪಮಾನಗೊಳಿಸುತ್ತಿದ್ದಾರೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಗುಡುಗಿದೆ.  
 
ಮೋದಿ ತಾವು ದೇಶದ ಪ್ರಧಾನಿಯಾಗಿದ್ದರಿಂದ ವಿಶ್ವ ಅವರನ್ನು ನಂಬುತ್ತದೆ ಎಂದು ಭಾವಿಸಿದ್ದಾರೆ. ಆದರೆ, ಕೆಲ ಹೇಳಿಕೆಗಳಿಂದ ದೇಶದ ಆರ್ಥಿಕತೆಗೆ ನೇರ ಹೊಡತ ಬೀಳುವುದನ್ನು ತಳ್ಳಿಹಾಕಲಾಗದು ಎಂದು ಶಿವಸೇನೆ ಆತಂಕ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ