ಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ಪಡೆ ವಾಹನಗಳ ಮೇಲೆ ಹೂಕುಂಡ ಎಸೆದ ಮಹಿಳೆ

ಬುಧವಾರ, 3 ಫೆಬ್ರವರಿ 2016 (16:48 IST)
ಪ್ರಧಾನಿ ನರೇಂದ್ರ ಮೋದಿ ಸಂಚರಿಸುತ್ತಿದ್ದ ಬೆಂಗಾವಲು ಪಡೆ ವಾಹನಗಳ ಮೇಲೆ ಮಹಿಳೆಯೊಬ್ಬಳು ಹೂ ಕುಂಡವನ್ನು ಎಸೆದ ಹಿನ್ನೆಲೆಯಲ್ಲಿ ಪ್ರಧಾನಿ ಭದ್ರತೆಯ ಹೊಣೆ ಹೊತ್ತುಕೊಂಡಿರುವ ಎಸ್‌ಪಿಜಿ ಕಮಾಂಡೋಗಳು ಒಂದು ಕ್ಷಣ ಉದ್ರಿಕ್ತ ಸ್ಥಿತಿ ಎದುರಿಸುವಂತಾಗಿದೆ ಎಂದು ಮೂಲಗಳು ತಿಳಿಸಿವೆ.
    
ಪ್ರಧಾನಮಂತ್ರಿ ನರೇಂದ್ರ ಮೋದಿ ಸೌಥ್ ಬ್ಲಾಕ್‌ ಕಚೇರಿಯಿಂದ ಹೊರಗಡೆ ಬಂದು ಹೊರಡಲು ಅನುವಾಗುತ್ತಿದ್ದಂತೆ ಮಹಿಳೆಯೊಬ್ಬಳು ಮೋದಿಯವರನ್ನು ತಡೆಯಲು ಯತ್ನಿಸಿ ಘೋಷಣೆಗಳನ್ನು ಕೂಗಿದ್ದಾಳೆ. 
 
ಮೋದಿಯವರ ವಾಹನ ಸಾಗದಂತೆ ತಡೆಯಲು ಯತ್ನಿಸಿ ನಂತರ ಬೆಂಗಾವಲು ಪಡೆ ವಾಹನಗಳಿಗೆ ದಾರಿ ಬಿಡಲು ನಿರಾಕರಿಸಿ, ಮೋದಿಯವರನ್ನು ಭೇಟಿಯಾಗಲೇಬೇಕು ಎಂದು ಹೇಳಿದ್ದಾಳೆ.ನಂತರ ಭದ್ರತಾ ಸಿಬ್ಬಂದಿ ಒತ್ತಾಯಪೂರ್ವಕವಾಗಿ ಆಕೆಯನ್ನು ಬದಿಗೆ ಸರಿಸಿ ಹೋಗುತ್ತಿರುವ ಸಂದರ್ಭದಲ್ಲಿ ಮಹಿಳೆ ಕೋಪದಿಂದ ಹೂ ಕುಂಡವನ್ನು ಬೆಂಗಾವಲು ವಾಹನಗಳ ಮೇಲೆ ಎಸೆದಿದ್ದಾಳೆ.
 
ಭದ್ರತಾ ಸಿಬ್ಬಂದಿ ಕೂಡಲೇ ಆಕೆಯನ್ನು ಬಂಧಿಸಿ ವಿಚಾರಣೆಗಾಗಿ ಪಾರ್ಲಿಮೆಂಟ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ನಿರಾಕರಿಸಿದ್ದರಿಂದ ಮಹಿಳೆ ಕೋಪದಲ್ಲಿ ಇಂತಹ ಕೃತ್ಯ ಎಸಗಿದ್ದಾಳೆ. ಇದೊಂದು ಪೂರ್ವಯೋಜಿತ ಕೃತ್ಯವಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ