ಕಪ್ಪುಹಣ ಮಸೂದೆ ದುರ್ಬಲ: ಕೇಂದ್ರ ಸರಕಾರದ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಕಿಡಿ

ಶನಿವಾರ, 25 ಏಪ್ರಿಲ್ 2015 (17:20 IST)
ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳ(ತೆರಿಗೆ ಹೇರುವುದು) ಬಿಲ್ 2015 ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಇದು ಕಪ್ಪು ಹಣ ಮರಳಿ ತರುವಲ್ಲಿ ಸಹಾಯ ಮಾಡುವುದಿಲ್ಲ. ಕಪ್ಪು ಹಣ ಹೊಂದಿದ್ದವರು ಕಾನೂನಿಗೆ ಸಿಕ್ಕಿಬಿದ್ದಲ್ಲಿ ಅವರಿಂದ "ಆದಾಯ" ಸಂಗ್ರಹಿಸಲು ಮಾತ್ರ ಇದು ಸಹಕಾರಿಯಾಗಬಲ್ಲದು ಎಂದು ಹೇಳಿದ್ದಾರೆ. 


"ಕಪ್ಪುಹಣವನ್ನು ಮರಳಿ ತರುತ್ತೇವೆ ಎಂಬ ನಮ್ಮ ಚುನಾವಣೆ ಆಶ್ವಾಸನೆಗಳಿಗೆ ಸಂಬಂಧಿಸಿದಂತೆ ಈ ಮಸೂದೆ ಪೂರಕವಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಕಪ್ಪುಹಣವನ್ನು ಮರಳಿ ತಂದ ಬಳಿಕ ಮಾತ್ರ ಇದು ಉಪಯೋಗಕ್ಕೆ ಬರಬಲ್ಲದು. ಈ ಮಸೂದೆಯನ್ನು ನೀವು ತೆರಿಗೆ ಕೋನದಿಂದ ನೋಡಲು ಹೇಗೆ ಸಾಧ್ಯ ? ಕಪ್ಪು ಹಣವನ್ನು ಮರಳಿ ತರುವುದು ಹೇಗೆ ಎಂಬುದು ಈ ಬಿಲ್‌ನಲ್ಲಿ ಇಲ್ಲ", ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ಎರಡು ಬ್ಯಾಂಕ್‌ಗಳನ್ನು ಹೊರತು ಪಡಿಸಿದರೆ ಬೇರೆ ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪುಹಣದ ಖಾತೆಗಳನ್ನು ಹೊಂದಿರುವವರ ಹೆಸರು ಭಾರತ ಸರಕಾರದ ಬಳಿ ಇಲ್ಲ ಎಂದು ಅವರು ತಿಳಿಸಿದ್ದಾರೆ.
 
"ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ಮರಳಿ ತರಲು ಸರಕಾರ ಮೊದಲು ಸುಗ್ರೀವಾಜ್ಞೆಯನ್ನು ಹೊರಡಿಸಿ ವಿದೇಶಗಳಿಗೆ ಸಹಕರಿಸುವಂತೆ ಕೋರಬೇಕು,  ನಂತರ ವಿದೇಶಿ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿರುವ ಭಾರತೀಯರ ಹೆಸರುಗಳನ್ನು ಘೋಷಿಸುವಂತೆ ಮನವಿ ಮಾಡಿದಾಗ ಮಾತ್ರ ಕಪ್ಪು ಹಣವನ್ನು ಮರಳಿ ತರಲು ಸಾಧ್ಯ", ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ