ಮಧ್ಯಪ್ರದೇಶ ರಾಜ್ಯಪಾಲರ ವಜಾ: ದೂರು ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು

ಸೋಮವಾರ, 6 ಜುಲೈ 2015 (15:00 IST)
ಮಧ್ಯಪ್ರದೇಶದ ವ್ಯಾಪಂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾದ ರಾಜ್ಯಪಾಲ ರಾಮ್ ನರೇಶ್ ಯಾದವ್‌ರನ್ನು ವಜಾಗೊಳಿಸಿ ಪಾರದರ್ಶಕ ತನಿಖೆಗೆ ಅವಕಾಶ ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಮತ್ತು ನ್ಯಾಯಮೂರ್ತಿಗಳಾದ ಅರುಣ್ ಕುಮಾರ್ ಮಿಶ್ರಾ ಮತ್ತು ಅಮಿತ್ವ ರಾಯ್ ಪೀಠ ಹೇಳಿದೆ.  
 
ಮಧ್ಯಪ್ರದೇಶದ ವೃತ್ತಿಪರ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಭಾರಿ ಹಗರಣದಲ್ಲಿ ರಾಜ್ಯಪಾಲ ನರೇಶ್ ಯಾದವ್ ಕೂಡಾ ಭಾಗಿಯಾಗಿದ್ದರಿಂದ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಕೋರಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಲಾಗಿದೆ.
 
ರಾಜ್ಯಪಾಲ ರಾಮ್ ನರೇಶ್ ಯಾದವ್ ವಿರುದ್ಧ ಕೆಲ ವಕೀಲರ ಗುಂಪು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಅವರನ್ನು ತತ್‌ಕ್ಷಣದಿಂದಲೇ ವಜಾಗೊಳಿಸುವಂತೆ ಮನವಿ ಸಲ್ಲಿಸಿದೆ.
 
ಇದಕ್ಕಿಂತ ಮೊದಲು ವ್ಯಾಪಂ ಹಗರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡಕ್ಕೆ ಸುಪ್ರೀಂಕೋರ್ಟ್ ನಾಲ್ಕು ತಿಂಗಳುಗಳ ಕಾಲಾವಕಾಶ ನೀಡಿತ್ತು. ಹಗರಣದಲ್ಲಿ ಹೈ-ಪ್ರೋಫೈಲ್ ವೃತ್ತಿಪರರು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಆರೋಪಿಗಳಾಗಿದ್ದಾರೆ. ಇಲ್ಲಿಯವರೆಗೆ ವಿಶೇಷ ತನಿಖಾ ತಂಡ 1000 ಜನರನ್ನು ಬಂಧಿಸಿದೆ. ಹಗರಣದಲ್ಲಿ ಭಾಗಿಯಾದ ಸುಮಾರು 47 ಜನ ಅಸಹಜ ಸಾವನ್ನಪ್ಪಿದ್ದಾರೆ. 
 
ಮಧ್ಯಪ್ರದೇಶ ಸರಕಾರದ ವೃತ್ತಿಪರ ಪರೀಕ್ಷೆಯಲ್ಲಿ ಶಿಕ್ಷಕಿಯರು, ವೈದ್ಯಕೀಯ ಅಧಿಕಾರಿಗಳು, ಪೊಲೀಸ್ ಪೇದೆ ಮತ್ತು ಅರಣ್ಯ ಕಾವಲುಗಾರ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿತ್ತು. ದೇಶದಲ್ಲಿಯೇ ಇದೊಂದು ದೊಡ್ಡ ಹಗರಣವಾಗಿ ಹೊರಹೊಮ್ಮಿದೆ ಎಂದು ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ