ವಿದೇಶಕ್ಕೆ ಪರಾರಿಯಾಗಿರುವ ಮಲ್ಯ‌ಗೆ ಸುಪ್ರೀಂ ನೋಟಿಸ್

ಬುಧವಾರ, 9 ಮಾರ್ಚ್ 2016 (15:57 IST)
ದಿವಾಳಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ಮಲ್ಯ ಭಾರತದಿಂದ ಪಲಾಯನ ಮಾಡದಂತೆ ತಡೆಯಬೇಕೆಂದು ಕೋರಿ ಎಸ್‌ಬಿಐ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಎರಡು ವಾರಗಳಲ್ಲಿ ಉತ್ತರಿಸುವಂತೆ ಮಲ್ಯ ಅವರಿಗೆ ಬುಧವಾರ ನೋಟಿಸ್ ಜಾರಿ ಮಾಡಿದೆ. 
 
ಅವರು ವಿದೇಶದಲ್ಲಿದ್ದರೂ ಸಹ ವಕೀಲರ ಮೂಲಕ ನೋಟಿಸ್ ತಲುಪಿಸಲು ಕೋರ್ಟ್ ಆದೇಶಿಸಿದ್ದು, ಅರ್ಜಿ ವಿಚಾರಣೆಯನ್ನು ಎರಡು ವಾರಕ್ಕೆ ಮುಂದೂಡಿದೆ.
 
ವಿಜಯ ಮಲ್ಯ ಮಾರ್ಚ್‌ 2ರಂದೇ ಭಾರತ ತೊರೆದು ವಿದೇಶಕ್ಕೆ ಹಾರಿದ್ದಾರೆಂದು ಅಟಾರ್ನಿ ಜನರಲ್ ಮುಕುಲ್‌ ರೊಹ್ಟಗಿ ಸ್ಪಷ್ಟ ಪಡಿಸಿದ್ದಾರೆ. ಸಿಬಿಐ ಮೂಲಗಳು ಸಹ ಮಲ್ಯ ಲಂಡನ್‌ಗೆ ಹಾರಿರುವುದನ್ನು ಖಚಿತ ಪಡಿಸಿವೆ. 
 
ಅವರಿಗೆ ಲಂಡನ್ ನಗರ ಆಯುಕ್ತರ ಮೂಲಕ  ನೊಟೀಸ್ ಕಳುಹಿಸುವಂತೆ ಸುಪ್ರೀಂ ಕೋರ್ಟ್  ಸೂಚನೆ ನೀಡಿದ್ದು, ವಿದೇಶದಲ್ಲಿದ್ದರೂ ನೊಟೀಸ್‌ಗೆ ಉತ್ತರಿಸುವಂತೆ 2 ವಾರಗಳ ಕಾಲಾವಕಾಶ ನೀಡಿದೆ ಎನ್ನಲಾಗಿದೆ. 
 
ಮಲ್ಯ ಸಾವಿರಾರು ಕೋಟಿ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಒಕ್ಕೂಟ ಮಲ್ಯ ಪಾಸ್ ಪೋರ್ಟ್ ವಶ, ವಿದೇಶಕ್ಕೆ ಹೋಗದಂತೆ ತಡೆ ಕೋರಿ ಸುಪ್ರೀಂ ಮೆಟ್ಟಿಲೇರಿವೆ.

ವೆಬ್ದುನಿಯಾವನ್ನು ಓದಿ