ಸಲ್ಲೇಖನ ನಿಷೇಧಕ್ಕೆ ಸುಪ್ರೀಂಕೋರ್ಟ್ ತಡೆ

ಮಂಗಳವಾರ, 1 ಸೆಪ್ಟಂಬರ್ 2015 (09:37 IST)
ಜೈನ ಧರ್ಮೀಯರು ಕೈಗೊಳ್ಳುವ ಸಲ್ಲೇಖನ ವ್ರತವನ್ನು ನಿಷೇಧಿಸಿ ರಾಜಸ್ಥಾನ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ.
 
ಈ ಕುರಿತು ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರ, ರಾಜಸ್ಥಾನ ಹಾಗೂ ಇತರ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ನೋಟಿಸ್ ಜಾರಿ ಮಾಡಿದೆ. ಸುಪ್ರೀಂ ನೀಡಿದ ಈ ತಡೆಯಿಂದಾಗಿ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಜೈನ ಸಂಘಟನೆಗಳು ಸದ್ಯದ ಮಟ್ಟಿಗೆ ನಿರಾಳವಾಗಿವೆ.
 
ಸಲ್ಲೇಖನ ವ್ರತ ಕಾನೂನು ಬಾಹಿರ ಎಂದು ರಾಜಸ್ತಾನ ಹೈಕೋರ್ಟ್‌ ಆಗಸ್ಟ್ 10 ರಂದು ತೀರ್ಪು ನೀಡಿತ್ತು. ಜೈನ ಸಮುದಾಯದಲ್ಲಿ ಅಮರಣಾಂತ ಉಪವಾಸ ಮಾಡುವ ಸಲ್ಲೇಖನ ವ್ರತ ಪದ್ಧತಿಯು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದಂತೆ ಹಾಗೂ ಅಮಾನವೀಯ ಎಂದು ರಾಜಸ್ತಾನ ಹೈಕೋರ್ಟ್‌ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಜೈನ ಸಮುದಾಯದವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.  
 
ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಹೆಚ್‌.ಎಲ್. ದತ್ತು ಹಾಗೂ ನ್ಯಾ. ಅಮಿತಾವ್ ರಾಯ್ ಒಳಗೊಂಡ ನ್ಯಾಯಪೀಠ ರಾಜಸ್ತಾನ ಹೈಕೋರ್ಟ್‌ ತೀರ್ಪಿಗೆ ತಡೆ ಒಡ್ಡಿದೆ.

ವೆಬ್ದುನಿಯಾವನ್ನು ಓದಿ