ಅಕ್ರಮ ಆಸ್ತಿ ಕೇಸ್: 21 ದಿನಗಳ ನಂತ್ರ ಜೈಲಿನಿಂದ ಜಯಲಲಿತಾಗೆ ಬಿಡುಗಡೆ ಭಾಗ್ಯ

ಶುಕ್ರವಾರ, 17 ಅಕ್ಟೋಬರ್ 2014 (15:37 IST)
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಷರತ್ತುಬದ್ಧ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾಗೆ ಇಂದು ಸಂಜೆ ಬಿಡುಗಡೆಯಾಗಲಿದ್ದಾರೆ.
 
ಕಳೆದ 21 ದಿನಗಳಿಂದ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಜಯಲಲಿತಾ ಅವರು ಹೆಚ್‌ಎಎಲ್ ಏರ್‌ಪೋರ್ಟ್ ಮೂಲಕ ವಿಶೇಷ ವಿಮಾನದಲ್ಲಿ ಚೆನ್ನೈಗೆ ತೆರಳಲಿದ್ದಾರೆ.
 
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿದೆ.
 
ಜಯಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎಚ್.ಎಲ್ ದತ್ತು ನೇತೃತ್ವದ ನ್ಯಾಯಾಪೀಠ ಜೆ. ಜಯಲಲಿತಾ ಸೇರಿದಂತೆ ದತ್ತು ಪುತ್ರ ಸುಧಾಕರನ್ ಸ್ನೇಹಿತೆ ಶಶಿಕಲಾ ಮತ್ತು ಇಳವರಿಸಿ ಅವರಿಗೂ ಜಾಮೀನು ಮಂಜೂರು ಮಾಡಿದೆ.
 
ಅನಾರೋಗ್ಯದ ಹಿನ್ನಲೆಯಲ್ಲಿ ಜಯಲಲಿತಾಗೆ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್, ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ಹಾಗೂ ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತಿಲ್ಲ ಎಂದು ಷರತ್ತು ವಿಧಿಸಿದೆ.
 
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ಕೋರ್ಟ್ ಜಯಲಲಿತಾ ಅವರಿಗೆ 4 ವರ್ಷ ಶಿಕ್ಷೆ ವಿಧಿಸಿತ್ತು. ಪ್ರಕರಣ ಸಂಬಂಧ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಅಕ್ಟೋಬರ್ 7ರಂದು ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಹಾಗೂ ತಮಗೆ ಜಾಮೀನು ಮಂಜೂರು ಮಾಡುವಂತೆ ಕೋರಿ ಜಯಲಲಿತಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
 
ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜಯಲಲಿತಾ ಅವರಿಗೆ ಜಾಮೀನು ಮಂಜೂರು ಮಾಡಿದ್ದು, 21 ದಿನಗಳ ನಂತರ ಜಯಲಲಿತಾ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.
 
ವಿಶೇಷ ಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿಗೆ ಸಂಬಂಧಪಟ್ಟ ದಾಖಲೆಗಳನ್ನು ಹೈಕೋರ್ಟ್‌ಗೆ ಜಯಾ ಅವರು ಡಿಸೆಂಬರ್ 18ರೊಳಗಾಗಿ ಸಲ್ಲಿಸಬೇಕು. ದಾಖಲೆಗಳನ್ನು ಸಲ್ಲಿಸಲು 1 ದಿನ ತಡವಾದರೂ ಜಾಮೀನು ರದ್ದುಗೊಳಿಸುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
 

ವೆಬ್ದುನಿಯಾವನ್ನು ಓದಿ