111 ಹೆಣ್ಣು ಮಕ್ಕಳನ್ನು ಧಾರೆ ಎರೆದ ತಂದೆ

ಸೋಮವಾರ, 1 ಡಿಸೆಂಬರ್ 2014 (11:15 IST)
ಗುಜರಾತಿನ ಉದ್ಯಮಿ ಮಹೇಶ್ ಸಾವನಿ ಎಂಬುವವರು  ತಂದೆಯನ್ನು ಕಳೆದುಕೊಂಡ 111 ಯುವತಿಯರಿಗೆ ತಂದೆ ಸ್ಥಾನದಲ್ಲಿ ನಿಂತು ಅದ್ಧೂರಿಯಾಗಿ ಮದುವೆ ಮಾಡಿಸುವುದರ ಮೂಲಕ ಉದಾರತೆಯನ್ನು ಮೆರೆದ್ದಾರೆ.

ಮದುವೆ ಮಾಡಿಸಿರುವುದಷ್ಟೇ ಅಲ್ಲದೇ ಪ್ರತಿ ಜೋಡಿಗೆ 4.5 ಲಕ್ಷ ರೂ. ಮೌಲ್ಯದ ಒಡವೆ ವಸ್ತ್ರ, ಪೀಠೋಪಕರಣ ಹಾಗೂ ಕುಟುಂಬ ನಿರ್ವಹಣೆಗೆ ಅಗತ್ಯವಾದ ಪಾತ್ರೆ ಮತ್ತು ಇನ್ನೀತರ ವಸ್ತುಗಳನ್ನು ಸಹ ಅವರು ಹಂಚಿದ್ದಾರೆ.
 
ಈ ಸಾಮೂಹಿಕ ವಿವಾಹದಲ್ಲಿ ಎಲ್ಲ ಜಾತಿ, ಧರ್ಮಗಳ ಯುವತಿಯರು ಇದ್ದರು. ವಿಶೇಷ ಎಂದರೆ ಮೂವರು ಮುಸ್ಲಿಮ್ ಕನ್ಯೆಯರು ಸಹ ಈ ಸಂದರ್ಭದಲ್ಲಿ ವಿವಾಹ ಬಂಧನಕ್ಕೊಳಗಾದರು.
 
ಕೇವಲ 70 ರೂಪಾಯಿಗಳನ್ನು ಕೈಯಲ್ಲಿಟ್ಟುಕೊಂಡು ಸೂರತ್‌ಗೆ ಆಗಮಿಸಿ ಎತ್ತರಕ್ಕೆ ಬೆಳೆದ ತಾತನನ್ನು ನೆನಪಿಸಿಕೊಳ್ಳುವ ಸವಾನಿ "ಇದು  ಸಮಾಜ ನಮಗೆ ಕೊಟ್ಟದ್ದನ್ನು ಸಮಾಜಕ್ಕೆ ಹಿಂತಿರುಗಿಸುವ ದಾರಿಯಷ್ಟೇ. ಸಾಮೂಹಿಕ ವಿವಾಹಗಳನ್ನು ನಡೆಸಲು ನಾನು ಯಾವುದೇ ದೇಣಿಗೆಯನ್ನು ಬಯಸುವುದಿಲ್ಲ. ಮಗಳನ್ನು ಧಾರೆ ಎರೆಯುವುದಕ್ಕಿಂತ ಉತ್ತಮವಾದ ಪವಿತ್ರ ಕೆಲಸ ಮತ್ತೊಂದಿಲ್ಲ ಎನ್ನುವುದು ನನ್ನ ನಂಬಿಕೆ" ಎನ್ನುತ್ತಾರೆ. 
 
ರಿಯಲ್ ಎಸ್ಟೇಟ್ ಮತ್ತು ವಜ್ರದ ವ್ಯಾಪಾರಿಯಾಗಿರುವ ಮಹೇಶ್ ಸಾವನಿ, ಸೂರತ್‌ನ ಕಾರ್ಪೊರೇಟ್ ವಲಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.
 
"2009ರಲ್ಲಿ ನಾನು ತಂದೆಯನ್ನು ಕಳೆದುಕೊಂಡೆ. ಆದರೆ ಸಾವನಿ ನನ್ನ ತಂದೆಯ ಸ್ಥಾನವನ್ನು ತುಂಬಿದರು. ಅವರು ನನಗಷ್ಟೇ ಅಲ್ಲ. ನನ್ನ ಸಹೋದರ, ಸಹೋದರಿಯರಿಗೂ ಅವರು ತಂದೆ ಸ್ಥಾನ ತುಂಬಿದ್ದಾರೆ. ನನ್ನ ಬದುಕಿನಲ್ಲಿ  ಇಂತಹ ಮಹಾನ್ ವ್ಯಕ್ತಿಯನ್ನು ಕಳುಹಿಸಿದ ದೇವರಿಗೆ ಧನ್ಯವಾದಗಳು" ಎನ್ನುತ್ತಾರೆ ಸಾಮೂಹಿಕ ವಿವಾಹದಲ್ಲಿ ರೋಹಿತ್ ಧೋಲಾಕಿಯಾ ಅವರ ಕೈಹಿಡಿದ  ಮಿತಾಲಿ. 
 
"ನಾನು ಮಹೇಶ್ ಸಾವನಿಯವರನ್ನು ಭೇಟಿಯಾದಾಗ ಅವರಲ್ಲಿ ತಂದೆಯ ಮಮತೆಯನ್ನು ಕಂಡೆ. ಅವರಿಗೆ 'ಅಲ್ಲಾ' ದೀರ್ಘಾಯುಷ್ಯವನ್ನು ನೀಡಿ ಸುಖವಾಗಿರಿಸಲಿ" ಎನ್ನುತ್ತಾರೆ  ನಹೇದಾ ಬಾನು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಬಡತನದ ಬೇಗೆಯಲ್ಲಿ ಬಸವಳಿದಿದ್ದ ನಹೇದಾ ಬಾನು ಆರಿಫ್ ಕೈ ಹಿಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ