ಸ್ವಿಸ್‌ ಬ್ಯಾಂಕ್‌ನಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರ ಹೆಸರು ಪತ್ತೆ

ಭಾನುವಾರ, 26 ಅಕ್ಟೋಬರ್ 2014 (12:35 IST)
ವಿದೇಶದಲ್ಲಿ ಕಪ್ಪು ಹಣ ಹೊಂದಿರುವವರ ಪಟ್ಟಿಯಲ್ಲಿ ಯುಪಿಎ ಸರ್ಕಾರದ ಮಾಜಿ ಮಂತ್ರಿಯೂ ಇದ್ದಾರೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಸುಳಿವು ನೀಡಿದ ಬೆನ್ನಲ್ಲೇ, ಇಬ್ಬರು ಯುಪಿಎ ಮಂತ್ರಿಗಳಿಗೆ ಹೋಲಿಕೆಯಾಗುವ ಎರಡು ಹೆಸರುಗಳು ಸ್ವಿಸ್‌ ಬ್ಯಾಂಕೊಂದರ ಖಾತೆದಾರರ ಪಟ್ಟಿಯಲ್ಲಿರುವ ವಿಚಾರ ಬೆಳಕಿಗೆ ಬಂದಿದೆ. 
 
'ಸ್ವಿಜರ್ಲೆಂಡ್‌ನ‌ ಜಿನೇವಾದಲ್ಲಿನ ಎಚ್‌ಎಸ್‌ಬಿಸಿ ಬ್ಯಾಂಕಿನಲ್ಲಿ ಖಾತೆ ಹೊಂದಿರುವ 600ಕ್ಕೂ ಹೆಚ್ಚು ಭಾರತೀಯರ ಪಟ್ಟಿ 2011ರಲ್ಲಿ ಭಾರತದ ಕೈಗೆ ಸಿಕ್ಕಿತ್ತು. ಈ ಪೈಕಿ 210 ಮಂದಿ ಖಾತೆದಾರರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ವಿಂಗಡಿಸಿದೆ. ಆ ಗುರುತು ಪತ್ತೆಯಾಗದ ಖಾತೆದಾರರ ಪಟ್ಟಿಯಲ್ಲಿ ಯುಪಿಎ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಇಬ್ಬರು ವ್ಯಕ್ತಿಗಳಿಗೆ ಹೋಲಿಕೆಯಾಗುವಂತಹ ಹೆಸರುಗಳು ಇವೆ' ಎಂದು ದೆಹಲಿ ಮೂಲದ ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಆ ಮಾಜಿ ಮಂತ್ರಿಗಳು ಯಾರೆಂಬುದನ್ನು ಪತ್ರಿಕೆ ಬಹಿರಂಗಪಡಿಸಿಲ್ಲ. 
 
ಈ ಕುರಿತು ಸಂಬಂಧಿಸಿದ ಸಚಿವರೊಂದಿಗೆ ಖುದ್ದು ಮಾತನಾಡಲಾಗಿದೆ. ಆ ಇಬ್ಬರೂ ವ್ಯಕ್ತಿಗಳು ಎಚ್‌ಎಸ್‌ಬಿಸಿಯ ಜಿನೇವಾ ಶಾಖೆಯಲ್ಲಿ ಖಾತೆ ಹೊಂದಿರುವ ವಿಚಾರವನ್ನು ನಿರಾಕರಿಸಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ