ಇದೀಗ, ಬಿಜೆಪಿ ಸೇರ್ಪಡೆಯತ್ತ ಜಯಪ್ರದಾ ಕಣ್ಣು

ಶನಿವಾರ, 31 ಜನವರಿ 2015 (18:09 IST)
ಸಮಾಜವಾದಿ ಪಕ್ಷದಿಂದ ವಜಾಗೊಳಿಸಲ್ಪಟ್ಟಿರುವ ನಟಿ ಪರಿವರ್ತಿತ ರಾಜಕಾರಣಿ ಜಯಪ್ರದಾ ಬಿಜೆಪಿಗೆ ಸೇರ್ಪಡೆಯಾಗುವುದರ ಕುರಿತಂತೆ ಆ ಪಕ್ಷದ ಹಿರಿಯ ನಾಯಕರ ಜತೆ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಕೇವಲ ಜನಸೇವೆಯ ಉದ್ದೇಶದಿಂದ ತಾನು ಬಿಜೆಪಿಯನ್ನು ಸೇರಬಯಸಿದ್ದೇನೆ ಹೊರತು ಚುನಾವಣೆಗೆ ಕಣಕ್ಕಿಳಿಯುವ ಉದ್ದೇಶ ತಮಗಿಲ್ಲ ಎಂದು ಅವರು ತಿಳಿಸಿದ್ದಾರೆ. 
 
ಪಕ್ಷದ ಸಾಮಾನ್ಯ ಕಾರ್ಯಕರ್ತೆಯಾಗಿ ಬಿಜೆಪಿಯನ್ನು ಸೇರ ಬಯಸುತ್ತೇನೆ. ನಾನು ಪಕ್ಷದೊಳಗೆ ಯಾವ ಪಕ್ಷದ ಆಕಾಂಕ್ಷಿಯಲ್ಲ ಮತ್ತು  ಚುನಾವಣೆಗೆ ಕಣಕ್ಕಿಳಿಯಲು ಅವಕಾಶ ಕೋರಿ ಬಿಜೆಪಿಯನ್ನು ಸೇರುತ್ತಿಲ್ಲ ಎಂದು ಪ್ರಸಿದ್ಧ ನಟಿ ಸ್ಪಷ್ಟಪಡಿಸಿದ್ದಾರೆ. 
 
ಜಯಪ್ರದಾ ಬಿಜೆಪಿ ಸೇರಿ ಆಪ್ ನಾಯಕ ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿಯಲು ಬಯಸುತ್ತಿದ್ದಾರೆ ಎಂದು ಈ ಹಿಂದೆ ಪ್ರಕಟವಾಗಿದ್ದ ವರದಿಗಳನ್ನು ತಳ್ಳಿ ಹಾಕಿದ ಅವರು ನಾನು ಹಾಗೆ ಹೇಳಲೇ ಇಲ್ಲ. ಬಿಜೆಪಿಗೆ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದೆ. ಆದರೆ ಮಾಧ್ಯಮಗಳು ಅದನ್ನು ಹೈಲೈಟ್ ಮಾಡಿದವು. ಟಿಕೆಟ್ ಹಂಚಿಕೆ ಕುರಿತಂತೆ ಮಾತನಾಡಿಯೇ ನಾನು ಇಲ್ಲ ಎಂದು ಹೇಳಿದ್ದಾರೆ. 
 
ತಾವು ಸಮಾಜವಾದಿ ಪಕ್ಷದಲ್ಲಿದ್ದಾಗ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಜತೆ ಕಹಿ ಅನುಭವವನ್ನು ಪಡೆದೆ ಎಂದು ಆರೋಪಿಸಿದ ಅವರು, " ನರೇಂದ್ರ ಮೋದಿಯವರ ನಾಯಕತ್ವದ ಅಡಿಯಲ್ಲಿ  ಕೆಲಸ ಮಾಡಬಯಸುತ್ತೇನೆ. ನಾನು ಆರೋಗ್ಯಕರ ರಾಜಕೀಯವನ್ನು ಬಯಸುತ್ತೇನೆ. ಮತ್ತೆ ರಾಜಕೀಯದಲ್ಲಿ ಅಳಲು ಬಯಸುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ