ಪಳನಿಗೆ ಅಗ್ನಿಪರೀಕ್ಷೆ, ಅಮ್ಮನ ಹೆಸರಲ್ಲಿ ಪನ್ನೀರ್ ಪ್ರತಿತಂತ್ರ

ಶನಿವಾರ, 18 ಫೆಬ್ರವರಿ 2017 (08:23 IST)
ಮೊನ್ನೆ ತಾನೇ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿರುವ ಎಡಪ್ಪಾಡಿ ಕೆ ಪಳನಿಸ್ವಾಮಿಗೆ ಇಂದು ಅಗ್ನಿಪರೀಕ್ಷೆ ಎದುರಾಗಲಿದೆ. ಅವರಿಂದು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ, ಇನ್ನೊಂದೆಡೆ ಪನ್ನೀರ್ ಸೆಲ್ವಂ ಬಣ ಅವರ ವಿರುದ್ಧ ಪ್ರತಿತಂತ್ರ ಹೆಣೆಯುತ್ತಿದೆ.

ಬೆಳಗ್ಗೆ 11 ಗಂಟೆಗೆ ಪಳನಿಸ್ವಾಮಿ ವಿಶ್ವಾಸ ಮತಯಾಚನೆ ಮಾಡಲಿದ್ದು, ಈ ಮೂಲಕ 29 ವರ್ಷಗಳ ಬಳಿಕ ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಯಲಿದೆ.
 
ಪಳನಿಪರ ಶಾಸಕರು ಗೋಲ್ಡನ್ ಬೇ ರೆಸಾರ್ಟ್‌ನಲ್ಲಿ ಸೇಫಾಗಿದ್ದರೆ, ಇತ್ತ ಪಳನಿ ಸಿಎಂ ಆಗುತ್ತಿದ್ದಂತೆ ಕೈ ಕೈ ಹಿಸುಕಿಕೊಳ್ಳುತ್ತಿರುವ ಪನ್ನೀರ್ ಅಮ್ಮನ ಹೆಸರಲ್ಲಿ ರಾಜಕೀಯ ದಾಳವನ್ನು ಪ್ರಯೋಗಿಸಲಿದ್ದಾರೆ. ಶಶಿಕಲಾ ಕುಟುಂಬ ಮತ್ತು ಅವರ ಬೆಂಬಲಿಗರು ಸರ್ಕಾರ ರಚಿಸುವುದು ಅಮ್ಮನಿಗೂ ಇಷ್ಟವಿರಲಿಲ್ಲ. ಅವರಿಗೆ ನೋವಾಗಬಾರದೆಂದರೆ ಶಶಿಕಲಾ ಬೆಂಬಲಿತ ಸರ್ಕಾರಕ್ಕೆ ಮತ ಚಲಾಯಿಸಬೇಡಿ ಎಂದು ಭಾವನಾತ್ಮಕ ಒತ್ತಡವನ್ನು ಹೇರುವುದು ಅವರ ತಂತ್ರ.
 
ನಿನ್ನೆ ವಿಧಾನಸಭಾ ಸ್ಪೀಕರ್ ಧನಪಾಲ್ ಅವರನ್ನು ಭೇಟಿ ಮಾಡಿದ್ದ ಪನ್ನೀರ್ ಸೆಲ್ವಂ ತಮ್ಮ ಬಣಕ್ಕೆ ಪ್ರತ್ಯೇಕ ಆಸನ ನೀಡುವಂತೆ ವಿನಂತಿ ಮಾಡಿಕೊಂಡಿದ್ದಾರೆ. 
ಒಟ್ಟಿನಲ್ಲಿ ತಮಿಳುನಾಡು ವಿಧಾನಸಭೆ ಅಗ್ನಿಕುಂಡದಂತಾಗಿದ್ದು ಕುದುರೆ ವ್ಯಾಪಾರ ನಡೆಯುವ ಸಾಧ್ಯತೆಗಳಿವೆ.
 
234 ಸದಸ್ಯ ಬಲದ ವಿಧಾನಸಭೆಯಲ್ಲಿ 124 ಸದಸ್ಯರ ಬೆಂಬಲ ತಮಗೆ ಇದೆ ಎಂದು ಪಳನಿಸ್ವಾಮಿ ಹೇಳಿಕೊಂಡಿದ್ದಾರೆ. ಅದರಲ್ಲೊಬ್ಬ ಇಂದು ಪನ್ನೀರ್ ಬಳಗಕ್ಕೆ ಸೇರಿದ್ದಾರೆ. ವಿಶ್ವಾಸಮತ ಪಡೆಯಲು 117 ಸದಸ್ಯರ ಬೆಂಬಲ ಬೇಕಾಗುತ್ತದೆ. ಇತ್ತ ಬಂಡಾಯ ನಾಯಕ ಪನ್ನೀರ್‌ಸೆಲ್ವಂಗೆ ಕೇವಲ 11 ಶಾಸಕರ ಬೆಂಬಲ ಮಾತ್ರ ಇದೆ. ಆದರೆ ಇನ್ನಷ್ಟು ಶಾಸಕರನ್ನು ತಮ್ಮ ಕಡೆಗೆ ಸೆಳೆದುಕೊಂಡು ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾಗಿಸುವುದು. ಇತ್ತ 89 ಶಾಸಕರ ಬೆಂಬಲವಿರುವ ಡಿಎಂಕೆ ಪಳನಿ ವಿರುದ್ಧ ಮತ ಚಲಾಯಿಸುವುದಾಗಿ ಹೇಳಿದೆ.
 
ಶಶಿಕಲಾ ಉಚ್ಚಾಟನೆ: ಪಕ್ಷದ ತತ್ವ ಸಿದ್ಧಾಂತಗಳಿಗೆ  ವಿರುದ್ಧವಾಗಿ ನಡೆ ದುಕೊಂಡಿದ್ದಾರೆ ಎಂದು ಆಪಾದಿಸಿ ಒ. ಪನ್ನೀರ್‌ಸೆಲ್ವಂ ಬಣವು ಎಐಎಡಿಎಂಕೆ  ಪ್ರಧಾನ ಕಾರ್ಯದರ್ಶಿ ವಿ. ಕೆ. ಶಶಿಕಲಾ  ಮತ್ತು ಅವರ ಇಬ್ಬರು ಸಂಬಂಧಿಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸುವ ಮೂಲಕ ಸೇಡು ತೀರಿಸಿಕೊಂಡಿದೆ.

ವೆಬ್ದುನಿಯಾವನ್ನು ಓದಿ