ತಮಿಳುನಾಡು ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಅಧಿಕಾರ ಸ್ವೀಕಾರ?

ಭಾನುವಾರ, 28 ಸೆಪ್ಟಂಬರ್ 2014 (11:19 IST)
66 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ನ್ಯಾಯಾಲಯ ತೀರ್ಪು ನೀಡುವುದರೊಂದಿಗೆ, ಜಯಲಲಿತಾ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿದೆ. ತೀರ್ಪು ಹೊರಬೀಳುತ್ತಿದ್ದಂತೆ ಅವರ ಶಾಸಕತ್ವ ಕೂಡ ರದ್ದಾಗಿದೆ. ಅಲ್ಲದೆ, ಅವರು 6 ವರ್ಷ ಕಾಲ ಚುನಾವಣೆಗೆ ಸ್ಪರ್ಧಿಸುವುದರಿಂದ ಅನರ್ಹಗೊಂಡಿದ್ದಾರೆ. 
 
ಹೀಗಾಗಿ ಈಗ ಜಯಲಲಿತಾ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಹುಡುಕಾಟ ಆರಂಭವಾಗಿದ್ದು, ಈ ಹಿಂದೆ ಒಮ್ಮೆ ಇಂಥದ್ದೇ ಪರಿಸ್ಥಿತಿ ಉದ್ಭವಿಸಿದ್ದಾಗ ಮುಖ್ಯಮಂತ್ರಿಯಾಗಿದ್ದ ಒ. ಪನ್ನೀರಸೆಲ್ವಂ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಆದರೆ ಯಾರೇ ಸಿಎಂ ಆದರೂ ಅವರು ಜಯಾ ನಿಷ್ಠರೇ ಆಗಿರುವ ಕಾರಣ ಅಧಿಕಾರ ಸೂತ್ರ ಜಯಾ ಕೈಯಲ್ಲೇ ಇರುತ್ತದೆ ಎಂಬುದು ನಿರ್ವಿವಾದ. 
 
2001ರಲ್ಲಿ ತಾನ್ಸಿ ಭೂಹಗರಣದಲ್ಲಿ ಸಿಲುಕಿದ್ದ ಜಯಲಲಿತಾ, ಸುಪ್ರೀಂಕೋರ್ಟ್‌ ಆದೇಶದನ್ವಯ ರಾಜೀನಾಮೆ ನೀಡಿದ್ದರು. ಆಗ ಒ. ಪನ್ನೀರಸೆಲ್ವಂ ಕೆಲ ತಿಂಗಳ ಮಟ್ಟಿಗೆ ಮುಖ್ಯಮಂತ್ರಿಯಾಗಿದ್ದರು. ಪನ್ನೀರಸೆಲ್ವಂ ಎಷ್ಟರ ಮಟ್ಟಿಗೆ ಜಯಲಲಿತಾ ಅವರಿಗೆ ಗೌರವ ಕೊಡುತ್ತಿದ್ದರೆಂದರೆ, ಮುಖ್ಯಮಂತ್ರಿ ಕಚೇರಿಯಲ್ಲಿ ಜಯಲಲಿತಾ ಕೂರುತ್ತಿದ್ದ ಸಿಎಂ ಕುರ್ಚಿ ಮೇಲೆ ಕೂರಲು ಹಿಂದೇಟು ಹಾಕಿದ್ದರು. ಆ ಕುರ್ಚಿಯನ್ನು ಪಕ್ಕಕ್ಕೆ ಇರಿಸಿ ಬೇರೊಂದು ಕುರ್ಚಿ ತರಿಸಿಕೊಂಡು ಕೂಡುತ್ತಿದ್ದರು. 
 
ಅಲ್ಲದೆ, ಜಯಲಲಿತಾ ಆದೇಶ ಇಲ್ಲದೇ ಒಂದು ಕಡತಕ್ಕೆ ಕೂಡ ಪನ್ನೀರಸೆಲ್ವಂ ಸಹಿ ಹಾಕುತ್ತಿರಲಿಲ್ಲವಂತೆ. ಯಾರನ್ನೂ ಅವರ ಅಪ್ಪಣೆ ಇಲ್ಲದೇ ಭೇಟಿ ಕೂಡ ಆಗುತ್ತಿರಲಿಲ್ಲವಂತೆ. ಪನ್ನೀರಸೆಲ್ವಂ ಅಲ್ಲದೆ ಮಾಜಿ ಮುಖ್ಯ ಕಾರ್ಯದರ್ಶಿ ಶೀಲಾ ಎಂಬುವರ ಹೆಸರು ಕೂಡ ಸಿಎಂ ಹುದ್ದೆಗೆ ಕೇಳಿಬರುತ್ತಿದೆ. ತುಳಿತಕ್ಕೊಳಗಾದ ಸಮುದಾಯದ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಜಯಲಲಿತಾ ಅವರು ಪ್ರತಿಷ್ಠಾಪಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ