ತಾಂಜಾನಿಯಾ ವಿದ್ಯಾರ್ಥಿನಿಯ ಮೇಲೆ ಹಲ್ಲೆ: ಐವರು ಆರೋಪಿಗಳ ಬಂಧನ

ಗುರುವಾರ, 4 ಫೆಬ್ರವರಿ 2016 (09:23 IST)
ತಾಂಜಾನಿಯಾ ಮೂಲದ ವಿದ್ಯಾರ್ಥಿನಿ ಲೀನಾ ಮಾರ್ಟಿನ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಭಾನುವಾರ ರಾತ್ರಿ ಕುಡಿದು ವಾಹನ ಚಲಾಯಿಸುತ್ತಿದ್ದ ಸುಡಾನ್ ಮೂಲದ ವಿದ್ಯಾರ್ಥಿಗಳು ಒಬ್ಬ ಪಾದಚಾರಿ ಮಹಿಳೆಯ ಸಾವಿಗೆ ಕಾರಣರಾಗಿದ್ದರು. ಆರೋಪಿಗಳನ್ನು ಹಿಡಿದು ಥಳಿಸುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಲೀನಾ ಕೂಡ ಆ ಸ್ಥಳಕ್ಕೆ ಬಂದಿದ್ದಾರೆ. ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಮಾನವೀಯತೆ ಮರೆತ ಬೆಂಗಳೂರಿಗರು ಆಕೆ ಕೂಡ ಆರೋಪಿಗಳ ಸ್ನೇಹಿತೆ ಎಂದು ತಪ್ಪಾಗಿ ಭಾವಿಸಿ ಬಟ್ಟೆ ಬಿಚ್ಚಿ, ಮನಸೋ ಇಚ್ಛೆ ಥಳಿಸಿದ್ದರು. 
 
ಅವರಿಂದ ತಪ್ಪಿಸಿಕೊಳ್ಳಲು ಯುವತಿ ನಿಧಾನವಾಗಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಹತ್ತಲು ಪ್ರಯತ್ನಿಸಿದಳಾದರೂ, ಬಸ್‌ನಲ್ಲಿದ್ದ ಪ್ರಯಾಣಿಕರೂ ಕೂಡ ಆಕೆಯನ್ನು ಬಸ್ ನಿಂದ ಹೊರದಬ್ಬುವ  ಮೂಲಕ ಅಮಾನವೀಯತೆ ಪ್ರದರ್ಶಿಸಿದ್ದರು.
 
ಈ ಘಟನೆ ಈಗ ಜನಾಂಗೀಯ ದ್ವೇಷದ ಬಣ್ಣ ಪಡೆದುಕೊಳ್ಳುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗೆ ಕಾರಣವಾಗುತ್ತಿದೆ. 

ವೆಬ್ದುನಿಯಾವನ್ನು ಓದಿ