ತಾಂಜೇನಿಯಾ ವಿದ್ಯಾರ್ಥಿನಿ ಮೇಲೆ ಹಲ್ಲೆ: ಸಿಎಂ ಸಿದ್ದರಾಮಯ್ಯಗೆ ವರದಿ ಕೇಳಿದ ರಾಹುಲ್ ಗಾಂಧಿ

ಗುರುವಾರ, 4 ಫೆಬ್ರವರಿ 2016 (16:22 IST)
ತಾಂಜೇನಿಯಾದ ವಿದ್ಯಾರ್ಥಿನಿ ಮೇಲೆ ನಡೆದ ದೌರ್ಜನ್ಯ ಕುರಿತಂತೆ ಕೈಗೊಂಡ ಕ್ರಮಗಳ ಬಗ್ಗೆ ಕೂಡಲೇ ವರದಿ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಆದೇಶಿಸಿದ್ದಾರೆ.
 
ಏತನ್ಮಧ್ಯೆ, ಪೂರ್ವ ಆಫ್ರಿಕನ್ ದೇಶಗಳು ವಿದ್ಯಾರ್ಥಿನಿಯ ಮೇಲೆ ನಡೆದ ದೌರ್ಜನ್ಯ ಕುರಿತಂತೆ ಭಾರತ ಸರಕಾರದೊಂದಿಗೆ ಕಳವಳ ಹಂಚಿಕೊಂಡ ಹಿನ್ನೆಲೆಯಲ್ಲಿ , ವಿದ್ಯಾರ್ಥಿನಿಯ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿದ ಕೇಂದ್ರ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್, ನಗರದಲ್ಲಿರುವ ಎಲ್ಲಾ ವಿದೇಶಿ ವಿದ್ಯಾರ್ಥಿಗಳ ರಕ್ಷಣೆ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಘಟನೆಯ ಬಗ್ಗೆ ಮಾತನಾಡಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿರುವುದಾಗಿ ತಿಳಿಸಿದ್ದಾರೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.
 
ಆಕ್ರೋಶಗೊಂಡಿದ್ದ ಗುಂಪೊಂದು 21 ವರ್ಷದ ತಾಂಜೇನಿಯಾದ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿ ನಗ್ನಗೊಳಿಸಿ ಪರೇಡ್ ಮಾಡಿಸಿದ್ದಾರೆ ಎನ್ನುವ ವರದಿ ಬಹಿರಂಗವಾಗಿತ್ತು.
 
ವಿದ್ಯಾರ್ಥಿನಿಯನ್ನು ನಗ್ನಗೊಳಿಸಿ ಪರೇಡ್ ಮಾಡಿಸಲಾಗಿದೆ ಎನ್ನುವ ವರದಿಗಳನ್ನು ತಳ್ಳಿಹಾಕಿದ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್, ಅದೇ ಸ್ಥಳದಲ್ಲಿ ಸೂಡಾನ್ ದೇಶದ ವಿದ್ಯಾರ್ಥಿಯೊಬ್ಬ ವಾಹನ ಅಪಘಾತಕ್ಕೆ ಕಾರಣವಾಗಿದ್ದರಿಂದ ಆಕ್ರೋಶಗೊಂಡ ಗುಂಪು ಯುವತಿಯ ಮೇಲೆ ಹಲ್ಲೆ ನಡೆಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ