ರಾಜಕೀಯ ರಣತಂತ್ರಜ್ಞ ಪ್ರಶಾಂತ್ ಕಿಶೋರ್ ನೆರವು ಪಡೆಯಲು ತರುಣ್ ಗೊಗೈ ಕಾತುರ

ಮಂಗಳವಾರ, 24 ನವೆಂಬರ್ 2015 (14:10 IST)
ಆಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೈ ಮುಂಬರುವ 2016ರ ವಿಧಾನಸಭೆ ಚುನಾವಣೆಗಾಗಿ ರಾಜಕೀಯ ರಣತಂತ್ರಜ್ಞ ಪ್ರಶಾಂತ್ ಕಿಶೋರ್ ನೆರವು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ.
 
ಪ್ರಶಾಂತ್ ಕಿಶೋರ್, ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ನೆರವು ನೀಡಿ ಗೆಲುವಿಗೆ ಕಾರಣವಾಗಿದ್ದರು. ಬಿಹಾರ್ ವಿಧಾನಸಭೆಯಲ್ಲೂ ಜಯಭೇರಿ ಬಾರಿಸಿದ ನಿತೀಶ್ ಕುಮಾರ್ ಪರವಾಗಿ ನಿಂತಿದ್ದರು.  
 
ಹೌದು, ಪ್ರಶಾಂತ್ ಕಿಶೋರ್ ಅವರೊಂದಿಗೆ ಚರ್ಚೆ ನಡೆಸಿ ಅವರ ಸೇವೆಯನ್ನು ಬಯಸಿದ್ದೇನೆ. ಆದಾಗ್ಯೂ, ಅವರು ನೆರವು ನೀಡುತ್ತಾರೋ ಇಲ್ಲವೋ ಎನ್ನುವುದು ಅವರಿಗೆ ಬಿಟ್ಟ ವಿಷಯವಾಗಿದೆ ಎಂದು ಹೇಳಿದ್ದಾರೆ. 
 
ಕೇಂದ್ರ ಸರಕಾರದ ಮಲತಾಯಿ ಧೋರಣೆ ವಿರೋಧಿಸಿ ಸಂಸತ್ತಿನ ಮುಂದೆ ಧರಣಿ ನಡೆಸುತ್ತೇನೆ. ಕಳೆದ ಒಂದು ವರ್ಷದಲ್ಲಿ ಕೇಂದ್ರ ಸರಕಾರ ಆಸ್ಸಾಂ ರಾಜ್ಯಕ್ಕೆ ಬಿಡುಗಡೆ ಮಾಡಿದ ಹಣದ ನೆರವು ಕುರಿತಂತೆ ಕೇಂದ್ರದ ಯಾವುದೇ ಸಚಿವರೊಂದಿಗೆ ದೂರದರ್ಶನದಲ್ಲಿ ನೇರವಾಗಿ ಚರ್ಚಿಸಲು ಸಿದ್ದವಾಗಿದ್ದೇನೆ ಎಂದು ಘೋಷಿಸಿದರು. 
 
ಕೇಂದ್ರ ಸರಕಾರ ತೈಲ ತೆರಿಗೆ ಮತ್ತು ಇತರ ಯೋಜನೆಗಳಿಗಾಗಿ ರಾಜ್ಯಕ್ಕೆ 20 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕಾಗಿದೆ. ಆದರೆ, ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
 
ಹಿಂದುಸ್ತಾನ್ ಹಿಂದೂಗಳದ್ದು ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ತಾತ್ಕಾಲಿಕ ಗವರ್ನರ್ ಪಿಬಿ.ಆಚಾರ್ಯ ಅವರನ್ನು ತೆಗೆದುಹಾಕಿ ಖಾಯಂ ರಾಜ್ಯಪಾಲರನ್ನು ನೇಮಿಸಬೇಕು ಎಂದು ಮುಖ್ಯಮಂತ್ರಿ ತರುಣ್ ಗೊಗೈ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ