ಸಿಎ ಪಾಸಾದ ಚಹಾ ಮಾರಾಟಗಾರ, ಸರಕಾರದ ಯೋಜನೆಗೆ ರಾಯಭಾರಿಯಾಗಿ ನೇಮಕ

ಸೋಮವಾರ, 25 ಜನವರಿ 2016 (16:27 IST)
ವಿದ್ಯೆಗೆ ಶ್ರೀಮಂತ, ಬಡವ, ಬಲ್ಲಿದ ಎನ್ನುವ ಮಿತಿಯಿಲ್ಲ. ಚಹಾ ಮಾರಾಟ ಮಾಡುತ್ತಿರುವ ಯುವಕನಾದ ಸೋಮನಾಥ್ ಗಿರಾಮ್, ಸಿಎ ಪರೀಕ್ಷೆಯಲ್ಲಿ ಪಾಸಾಗಿ ಮಹಾರಾಷ್ಟ್ರ ಸರಕಾರದ ಯೋಜನೆಗೆ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.
 
ಸೋಲಾಪುರ್ ಜಿಲ್ಲೆಯ ಸದಾಶಿಪೇಟ್ ಪ್ರದೇಶದಲ್ಲಿರುವ ವೃತ್ತದಲ್ಲಿ ಚಹಾ ಮಾರಾಟ ಮಾಡುತ್ತಿದ್ದ 28 ವರ್ಷ ವಯಸ್ಸಿನ ಸೋಮನಾಥ್‌ ಸಾಧನೆ ಕಂಡ ಮಹಾರಾಷ್ಟ್ರ ಸರಕಾರ, ಸರಕಾರದ ಯೋಜನೆಯಾದ ಸಂಪಾದಿಸು ಮತ್ತು ಕಲಿ ಎನ್ನುವ ಯೋಜನೆಗೆ ಅವರನ್ನು ರಾಯಬಾರಿಯನ್ನಾಗಿ ನೇಮಕ ಮಾಡಿದೆ. 
  
ಇದೀಗ ಚಹಾ ಮಾರಾಟ ಮಾಡುವವರಿಗೆ ಒಳ್ಳೆದಿನಗಳು ಬರುತ್ತಿರುವಂತೆ ಕಾಣಿಸುತ್ತಿವೆ. ಚಹಾ ಮಾರಾಟ ಮಾಡುತ್ತಿದ್ದ ಮೋದಿ ಪ್ರಧಾನಿಯಾಗಿದ್ದಾರೆ. ಇದೀಗ, ಚಹಾ ಮಾರಾಟ ಮಾಡುತ್ತಿರುವ ಸೋಮನಾಥ್ ಸಿಎ ಪಾಸಾಗಿದ್ದಾರೆ ಎಂದು ಶಿಕ್ಷಣ ಖಾತೆ ಸಚಿವ ವಿನೋದ್ ತಾವಡೆ ಸಂತಸ ವ್ಯಕ್ತಪಡಿಸಿದ್ದಾರೆ.  
 
ಸೋಮನಾಥ್ ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಎನ್ನುವ ಉದ್ದೇಶದಿಂದ ಸರಕಾರಿ ಯೋಜನೆಗೆ ಅವರನ್ನು ರಾಯಭಾರಿಯಾಗಿ ಘೋಷಿಸಿದ್ದೇನೆ ಎಂದು ತಿಳಿಸಿದ್ದಾರೆ.
 
ಬೆಳವಣಿಗೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ ಸೋಮನಾಥ್, ಮಹಾರಾಷ್ಟ್ರ ಸರಕಾರದ ಮಹತ್ವಕಾಂಕ್ಷಿ ಸಂಪಾದನೆ ಮತ್ತು ಕಲಿ ಯೋಜನೆಗೆ ನನ್ನನ್ನು ರಾಯಬಾರಿಯಾಗಿ ನೇಮಕ ಮಾಡಲಾಗಿದೆ ಎನ್ನುವ ಮಾಹಿತಿ ಮಾಧ್ಯಮಗಳಿಂದ ತಿಳಿದು ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. 
 
ಬಡಮಕ್ಕಳ ಕ್ಷೇಮಾಭಿವೃದ್ದಿಗಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇನೆ ಎಂದು ಸೋಮನಾಥ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ