ವಿದ್ಯಾರ್ಥಿಗೆ ಕಬ್ಬಿಣದ ಸ್ಕೇಲ್‌ನಿಂದ ಹೊಡೆದ ಶಿಕ್ಷಕನ ಬಂಧನ

ಶನಿವಾರ, 26 ಜುಲೈ 2014 (13:37 IST)
8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯನ್ನು ಆತನ ಶಿಕ್ಷಕ ಕಬ್ಬಿಣದ ಸ್ಕೇಲ್‌ನಿಂದ ಅಮಾನವೀಯವಾಗಿ ಥಳಿಸಿದ ಘಟನೆ ಪಶ್ಚಿಮ ಬಂಗಾಳದ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. 

ರಾಜಧಾನಿ ಕೋಲ್ಕತಾದಿಂದ 15 ಕಿಮೀ ದೂರದಲ್ಲಿರುವ ಹೌರಾ ಜಿಲ್ಲೆಯಲ್ಲಿ ನಡೆದ ಈ ಘಟನೆ ನಡೆದಿದ್ದು, ತನ್ನ ಸಹಪಾಠಿಗಳ ಜತೆ ಪೆನ್ ಕೇಳಿದನೆಂಬ ಕ್ಷುಲ್ಲಕ ಕಾರಣಕ್ಕೆ, ತಾನು ಪಾಠ ಮಾಡುವ ವೇಳೆ  ಆತ ಮಾತನಾಡಿದ ಎಂದು ಕೋಪಗೊಂಡ ಶಿಕ್ಷಕ  ದೂರದಿಂದ ಕಬ್ಬಿಣದ ಸ್ಕೇಲ್‌ನ್ನು ಆತನೆಡೆಗೆ ಬೀಸಿದ್ದಾನೆ ಎಂದು ಬಾಲಕನ ಪಾಲಕರು ದೂರು ನೀಡಿದ್ದಾರೆ.
 
ಆ ಸ್ಕೇಲ್  ಅಪ್ಪಳಿಸಿದ ವೇಗಕ್ಕೆ ಬಾಲಕ ಪ್ರಜ್ಞೆ ಕಳೆದುಕೊಂಡ. ಆತನ ಮನೆಗೆ ಮಾಹಿತಿ ನೀಡಿದ ಶಾಲಾ ಅಧಿಕಾರಿಗಳು ಆತನನ್ನು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಪಡೆದ ಬಾಲಕನನ್ನು ಆ ದಿನವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. 
 
ಮರುದಿನ ಬೆಳಿಗ್ಗೆ ಬಾಲಕನ ತಂದೆ ಪೋಲಿಸ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ಪೋಲಿಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯಿಂದ ಆಘಾತಗೊಂಡಿರುವ ಬಾಲಕ ಶಾಲೆಗೆ ಹೋಗಲು ಹಿಂಜರಿಯುತ್ತಿದ್ದಾನೆ. 
 
ಮೂರುವರೆ ವರ್ಷದ ಮಗುವೊಂದನ್ನು ಆಕೆಯ ಮನೆ ಪಾಠದ ಶಿಕ್ಷಕಿ ಅಮಾನುಷವಾಗಿ ಥಳಿಸಿದ ಪ್ರಕರಣ ವರದಿಯಾಗಿ ಮೂರು ದಿನ ಕಳೆಯುವಷ್ಟರಲ್ಲಿ ಅದನ್ನೇ ಹೋಲುವ ಈ ಪ್ರಕರಣ ವರದಿಯಾಗಿದೆ.  ಪವಿತ್ರ ದೇಗುಲ ಎಂದು ಕರೆಸಿಕೊಳ್ಳುವ ಶಾಲೆ, ದೇವರೆಂದು ಪೂಜೆಗೊಳ್ಳುವ ಶಿಕ್ಷಕರು ಇತ್ತೀಚಿಗೆ ಕ್ರೂರಿಗಳಾಗಿ ವರ್ತಿಸುತ್ತಿರುವುದು ವಿಷಾದನೀಯವಾಗಿದೆ.

ವೆಬ್ದುನಿಯಾವನ್ನು ಓದಿ